ADVERTISEMENT

ಕದ್ದ ಕಾರುಗಳಲ್ಲಿ ರಕ್ತಚಂದನ ಸಾಗಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 16:25 IST
Last Updated 1 ಜುಲೈ 2022, 16:25 IST
ಆರೋಪಿಗಳಿಂದ ಜಪ್ತಿ ಮಾಡಲಾದ ರಕ್ತಚಂದನ ಹಾಗೂ ಕಾರುಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ರಕ್ತಚಂದನ ಹಾಗೂ ಕಾರುಗಳು   

ಬೆಂಗಳೂರು: ಕದ್ದ ಕಾರುಗಳಲ್ಲಿ ರಕ್ತಚಂದನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಎಸ್. ವಿಘ್ನೇಶ್ (25) ಹಾಗೂ ಎಂ. ಚಂದ್ರು (26) ಬಂಧಿತರು. ಇವರಿಂದ ₹ 51 ಲಕ್ಷ ಮೌಲ್ಯದ 453 ಕೆ.ಜಿ ತೂಕದ ರಕ್ತಚಂದನದ ತುಂಡುಗಳು ಹಾಗೂ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶೇಷಾದ್ರಿಪುರದ ರೈಲ್ವೆ ಪರ್ಯಾಯ ರಸ್ತೆಯಲ್ಲಿ ಜೂನ್ 23ರಂದು ಸಿಬ್ಬಂದಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಆರೋಪಿಗಳು, ಪೊಲೀಸರನ್ನು ನೋಡಿ ಕಾರು ರಿವರ್ಸ್‌ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದರು. ಕಾರು ಗಮನಿಸಿದ್ದ ಸಿಬ್ಬಂದಿ ಬೆನ್ನಟ್ಟಿ ನಿಲ್ಲಿಸಿದ್ದರು. ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು, ಕಾರಿನಲ್ಲಿ ಪರಿಶೀಲಿಸಿದಾಗ ರಕ್ತಚಂದನದ ತುಂಡುಗಳು ಪತ್ತೆಯಾದವು’ ಎಂದು ತಿಳಿಸಿದರು.

ADVERTISEMENT

‘ಆಂಧ್ರಪ್ರದೇಶ ಕಾಡಿನಲ್ಲಿರುವ ಜನರಿಂದ ರಕ್ತಚಂದನ ಖರೀದಿಸುತ್ತಿದ್ದ ಆರೋಪಿಗಳು, ಬೆಂಗಳೂರು ಹಾಗೂ ಇತರೆಡೆ ಮಾರಾಟ ಮಾಡುತ್ತಿದ್ದರು. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

‘ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾರುಗಳನ್ನು ಕದ್ದಿದ್ದ ಆರೋಪಿಗಳು, ಅವುಗಳನ್ನೇ ರಕ್ತಚಂದನ ಸಾಗಿಸಲು ಬಳಸುತ್ತಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.