ADVERTISEMENT

ರೇಖಾ ಕದಿರೇಶ್ ಹತ್ಯೆ ಪ್ರಕರಣ: ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 15:45 IST
Last Updated 31 ಡಿಸೆಂಬರ್ 2024, 15:45 IST
ರೇಖಾ ಕದಿರೇಶ್‌ 
ರೇಖಾ ಕದಿರೇಶ್‌    

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಏಳು ಅಪರಾಧಿಗಳಿಗೆ ನಗರದ 72ನೇ ಸಿಸಿಎಚ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.

ಅಂಜನಪ್ಪ ಗಾರ್ಡನ್‌ ನಿವಾಸಿ ರೇಖಾ ಅವರನ್ನು 2021ರ ಜೂನ್‌ನಲ್ಲಿ ಅವರ ಕಚೇರಿ ಎದುರೇ ಹತ್ಯೆ ಮಾಡಿ ಅಪರಾಧಿಗಳು ಪರಾರಿ ಆಗಿದ್ದರು. ಪೀಟರ್(49), ಸೂರ್ಯ ಅಲಿಯಾಸ್ ಸೂರಜ್ (23), ಸ್ಟೀಫನ್ (24), ಪುರುಷೋತ್ತಮ (25), ಅಜಯ್ (24), ಅರುಣ್‌ಕುಮಾರ್ (39) ಹಾಗೂ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ (36) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ಪ್ರಕರಣದ ಅಪರಾಧಿ ಮಾಲಾ (63) ವಿಚಾರಣೆ ವೇಳೆ ಮೃತಪಟ್ಟಿದ್ದಳು. 

ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದ ಕಾಟನ್‌ಪೇಟೆ ಪೊಲೀಸರು 2021ರ ಸೆಪ್ಟೆಂಬರ್‌ನಲ್ಲಿ ನಗರದ 31ನೇ ಎಸಿಎಂಎಂ ನ್ಯಾಯಾಲಯಕ್ಕೆ 780 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ– ಪ್ರತಿವಾದ ನಡೆದಿತ್ತು. ‘ಆರೋಪಿಗಳು ಕೃತ್ಯ ಎಸಗಿರುವುದು ಸಾಬೀತಾಗಿದೆ’ ಎಂದು ತೀರ್ಮಾನಿಸಿರುವ ನ್ಯಾಯಾಲಯ, ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಏಳು ಅಪರಾಧಿಗಳ ಪೈಕಿ ಮೂವರು ಷರತ್ತುಬದ್ಧ ಜಾಮೀನು ಪಡೆದು ಕಾರಾಗೃಹದಿಂದ ಬಿಡುಗಡೆ ಆಗಿದ್ದರು. ನಾಲ್ವರು ಜೈಲಿನಲ್ಲಿದ್ದರು.

ದೋಷಾರೋಪ ಪಟ್ಟಿಯಲ್ಲಿ ಏನಿತ್ತು?: ‘ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಪ್ರತ್ಯೇಕವಾಗಿ ವಾಸವಿದ್ದ ರೇಖಾ ಅವರು ಪತಿ ಕುಟುಂಬವನ್ನು ರಾಜಕೀಯವಾಗಿ ಕಡೆಗಣಿಸಿದ್ದರು. ಇದು ಕದಿರೇಶ್ ಅಕ್ಕ ಮಾಲಾ ಹಾಗೂ ಸಂಬಂಧಿಕರನ್ನು ಕೆರಳಿಸಿತ್ತು’ ಎಂಬ ವಿಚಾರವನ್ನು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.

‘ಕದಿರೇಶ್ ಅವರ ಜತೆಗೆ ಪೀಟರ್ ಓಡಾಡಿಕೊಂಡಿದ್ದ. ಕದಿರೇಶ್ ಕೊಲೆಯಾದ ನಂತರ, ರೇಖಾ ಅವರ ಅಂಗರಕ್ಷಕನಾಗಿ ಸುತ್ತಾಡುತ್ತಿದ್ದ. ಆತನನ್ನು ದೂರವಿಡಲು ರೇಖಾ ಯತ್ನಿಸುತ್ತಿದ್ದರು. ಇದರಿಂದ ಪೀಟರ್ ಸಿಟ್ಟಾಗಿದ್ದ. ಪೀಟರ್‌ನನ್ನು ಸಂಪರ್ಕಿಸಿದ್ದ ಮಾಲಾ ಹಾಗೂ ಅವರ ಮಗ ಅರುಣ್‌ಕುಮಾರ್, ರೇಖಾ ಹತ್ಯೆಗೆ ಸಂಚು ರೂಪಿಸಿದ್ದರು. ನನ್ನ ಸಹೋದರನ ಕೈಯಲ್ಲಿದ್ದ ರಾಜಕೀಯ ಶಕ್ತಿಯನ್ನು ರೇಖಾ ತನ್ನದಾಗಿಸಿಕೊಳ್ಳುತ್ತಿದ್ದಾಳೆ. ಆಕೆಯೊಬ್ಬಳೇ ಬೆಳೆಯುತ್ತಿದ್ದಾಳೆ. ಆ ರಾಜಕೀಯ ಶಕ್ತಿ ನಮ್ಮ ಕೈಗೆ ಬರಬೇಕು. ಹೀಗಾಗಿ, ರೇಖಾ ಕೊಲೆ ಮಾಡೋಣ’ ಎಂದು ಮಾಲಾ ಹೇಳಿದ್ದಳು. ಅದಕ್ಕೆ ಇತರೆ ಆರೋಪಿಗಳೂ ಒಪ್ಪಿ ಕಚೇರಿ ಬಳಿಗೆ ಬಂದು ಕೊಲೆ ಮಾಡಿ ಪರಾರಿ ಆಗಿದ್ದರು’ ಎಂಬುದು ತನಿಖೆಯಿಂದ ಗೊತ್ತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.