ADVERTISEMENT

ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ: ಆರ್‌ಎಸ್‌ಎಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2025, 9:26 IST
Last Updated 23 ಮಾರ್ಚ್ 2025, 9:26 IST
<div class="paragraphs"><p>ದತ್ತಾತ್ರೇಯ ಹೊಸಬಾಳೆ</p></div>

ದತ್ತಾತ್ರೇಯ ಹೊಸಬಾಳೆ

   

ಬೆಂಗಳೂರು: ‘ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದರು.

ಚನ್ನೇನಹಳ್ಳಿಯಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

ಮುಸ್ಲಿಮರಿಗೆ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 4ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರ ಕುರಿತು, ‘ಸಂವಿಧಾನದ ಪ್ರಕಾರ, ಹಿಂದುಳಿದವರಿಗೆ ಮಾತ್ರ ಮೀಸಲಾತಿ ಅನ್ವಯವಾಗಲಿದೆ. ಧರ್ಮಾಧಾರಿತವಾಗಿ ಮೀಸಲಾತಿ ನೀಡುವುದು ಎಂದರೆ ಸಂವಿಧಾನದ ವಿರುದ್ಧ ಹೋಗುವುದಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ನೀಡಿದ್ದ ಧರ್ಮಾಧಾರಿತ ಮೀಸಲಾತಿ ಕೋರ್ಟ್‌ಗಳಲ್ಲಿ ಬಿದ್ದು ಹೋಗಿದೆ’ ಎಂದು ಹೇಳಿದರು.

‘ವಕ್ಫ್‌ ಹೆಸರಲ್ಲಿ ಕೃಷಿ ಜಮೀನು ಒತ್ತುವರಿ ಆಗಿರುವುದರಿಂದ ರೈತರು ಸಂತ್ರಸ್ತರಾಗಿದ್ದಾರೆ. ತಪ್ಪುಗಳನ್ನು ಸರಿಪಡಿಸ

ಬೇಕು. ಕೇಂದ್ರ ಸರ್ಕಾರ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕ್ಷೇತ್ರ ಮರುವಿಂಗಡನೆ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿ ಸಭೆ ಕುರಿತು, ‘ರಾಜಕೀಯದಲ್ಲಿ ಇರುವವರು ಪ್ರತಿದಿನ ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ ಯಾವುದೇ ಕರಡು ಇಲ್ಲದೆ ಅಥವಾ ಅಧಿಕೃತವಾಗಿ ಎಲ್ಲೂ ಪ್ರಕಟಣೆಯಾಗದೆ ಸಂಘ ಏನನ್ನೂ ಹೇಳುವುದಿಲ್ಲ. ಈ ಕುರಿತು ನಾವು ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಸಮಾಜ ಮತ್ತು ರಾಷ್ಟ್ರದ ಒಳಿತು ಬಯಸಿದವರು ಆದರ್ಶವಾಗಿರಬೇಕು. ಅಸಹಿಷ್ಣುತೆ ಮತ್ತು ರಾಷ್ಟ್ರದ ನೀತಿಗಳನ್ನು ಧಿಕ್ಕರಿಸಿದವರು ಆಗಿರಬಾರದು. ಔರಂಗಜೇಬ್‌ ನಡೆದುಕೊಂಡ ರೀತಿಗೆ ಈಗ ವಿರೋಧ ವ್ಯಕ್ತವಾಗುತ್ತಿದೆ. ಇದು ಧರ್ಮದ ಕಾರಣಕ್ಕೆ ವಿರೋಧವಲ್ಲ. ದಾರಾ ಶಿಕೋಗೆ ಯಾರ ವಿರೋಧವೂ ಇಲ್ಲ’ ಎಂದು ಪ್ರತಿಪಾದಿಸಿದರು.

‘ಇಂದು, ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮರಾದ ದಿನ. ಭಾರತದ ಮಹಾನ್ ಮಹಿಳಾ ಸ್ವಾತಂತ್ರ್ಯ ಸೇನಾನಿ, ಕುಶಲ ಆಡಳಿತಗಾರ್ತಿ ಮತ್ತು ನಿರ್ಭೀತ ಯೋಧೆ ಅಬ್ಬಕ್ಕ ಅವರು ಜನಿಸಿ 500 ವರ್ಷಗಳಾದವು. ಅವರು ಎಲ್ಲರಿಗೂ ಸ್ಫೂರ್ತಿ’ ಎಂದು ಸ್ಮರಿಸಿದರು.

‘ಆರ್‌ಎಸ್‌ಎಸ್‌ ಯಾವ ಹೊಸ ಕಾರ್ಯವನ್ನೂ ಮಾಡಿಲ್ಲ. ದೇಶದಲ್ಲಿ ಶತಮಾನಗಳಿಂದ ಇರುವುದನ್ನೇ ಮುಂದುವರಿಸಿದೆ. ಸಂಘಕ್ಕೆ 100 ವರ್ಷ ಆಗಿದ್ದನ್ನು ನಾವು ಸಂಭ್ರಮಿಸುತ್ತಿಲ್ಲ. ಆತ್ಮಾವಲೋಕನ ಮತ್ತು ಸಂಘದ ಕೆಲಸ, ಸಮಾಜವನ್ನು ಸಂಘಟಿಸಲು ಪುನರ್‌ ಸಮರ್ಪಿಸಿಕೊಳ್ಳುವ ಸಮಯವಾಗಿ ಮಾಡಿಕೊಳ್ಳುತ್ತಿದ್ದೇವೆ’ ಎಂದರು.

ಜಾತಿ ವಿನಾಶಕ್ಕಾಗಿ ಸಂಘಕ್ಕೆ ಸೇರಿ

‘ಜಾತಿ ಬಗ್ಗೆ ಮಾತನಾಡಿದಷ್ಟೂ ಸಮಾವೇಶಗಳನ್ನು ಮಾಡಿದಷ್ಟು ಜಾತಿ ಗಟ್ಟಿಯಾಗುತ್ತಾ ಹೋಗುತ್ತದೆ. ಸಂಘವು ಯಾವುದೇ ಪ್ರಚಾರವಿಲ್ಲದೇ ಜಾತಿ ಪದ್ಧತಿ ವಿನಾಶಕ್ಕೆ ಶ್ರಮಿಸುತ್ತಿದೆ’ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು. ಸಂಘಕ್ಕೆ ಸೇರಿದ ಮೇಲೆ ಜಾತಿ ಭಾವ ಇಲ್ಲದೆ ಎಲ್ಲ ಸಮಾನರಾಗಿ ಕಾರ್ಯನಿರ್ವಹಿಸುತ್ತಾರೆ. ಅಂತರ್ಜಾತಿ ವಿವಾಹ ಆಗುತ್ತವೆ. ಜಾತಿ ವಿನಾಶ ಬಯಸುವವರು ಸಂಘಕ್ಕೆ ಸೇರಬೇಕು ಎಂದು ಆಹ್ವಾನಿಸಿದರು.

ಶತಮಾನೋತ್ಸವದ ಕಾರ್ಯಕ್ರಮ

ಸಂಘದ ಶತಮಾನೋತ್ಸವ ವರ್ಷಾಚರಣೆ 2025ರ ವಿಜಯದಶಮಿ ದಿನ ಆರಂಭವಾಗಲಿದೆ. ಸರಸಂಘಚಾಲಕರು ಪ್ರತಿ ವರ್ಷದಂತೆ ಈ ಬಾರಿಯೂ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೇಶದಾದ್ಯಂತ ಮಂಡಲ ಹಾಗೂ ನಗರ ಮಟ್ಟದಲ್ಲಿ ಗಣವೇಷಧಾರಿ ಸ್ವಯಂಸೇವಕರ ಕಾರ್ಯಕ್ರಮಗಳು ನಡೆಯಲಿವೆ ಎಂದು ದತ್ತಾತ್ರೇಯ ಹೊಸಬಾಳೆ ಮಾಹಿತಿ ನೀಡಿದರು. ‘ಪ್ರತಿ ಗ್ರಾಮ ಪ್ರತಿ ವಸತಿ ಪ್ರತಿ ಮನೆ’ ಎಂಬ ಎಂಬ ಘೋಷಣೆಯೊಂದಿಗೆ ನವೆಂಬರ್‌ನಿಂದ 2026ರ ಜನವರಿವರೆಗೆ ತಿಂಗಳಿಗೆ ಮೂರು ವಾರ ಮನೆ-ಮನೆ ಸಂಪರ್ಕ ಅಭಿಯಾನ ನಡೆಸಲಾಗುವುದು. ಮಂಡಲ ಅಥವಾ ವಸತಿಗಳಲ್ಲಿ ಹಿಂದೂ ಸಮ್ಮೇಳನ ಏರ್ಪಡಿಸಲಿದ್ದೇವೆ. ನಿತ್ಯದ ಜೀವನದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ರಾಷ್ಟ್ರದ ಕಾರಣಕ್ಕಾಗಿ ಎಲ್ಲರ ಕೊಡುಗೆ ಮತ್ತು ಪ್ರತಿಯೊಬ್ಬರ ಭಾಗವಹಿಸುವಿಕೆಯ ಸಂದೇಶವನ್ನು ನೀಡಲಾಗುವುದು ಎಂದರು.

15–30 ವರ್ಷ ವಯಸ್ಸಿನ ಯುವಜನರಿಗಾಗಿ ರಾಷ್ಟ್ರ ನಿರ್ಮಾಣ ಸೇವಾ ಚಟುವಟಿಕೆ ಮತ್ತು ಪಂಚ ಪರಿವರ್ತನದ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.