ADVERTISEMENT

ಸಾಮಾಜಿಕ ಅಭದ್ರತೆಯೇ ಮತಾಂತರಕ್ಕೆ ಕಾರಣ: ಲೇಖಕಿ ಬಿ.ಟಿ. ಲಲಿತಾ ನಾಯಕ್‌

ಬಂಜಾರರಿಗೆ ಕೃಷಿ ಜಮೀನು, ಹೈನುಗಾರಿಕೆಗೆ ನೆರವು ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 1:44 IST
Last Updated 24 ಡಿಸೆಂಬರ್ 2019, 1:44 IST
ಕಾರ್ಯಕ್ರಮದಲ್ಲಿ ಸೇವಾಲಾಲ್‌ ಬಂಜಾರ ಶಕ್ತಿಪೀಠದ ಬಳಿರಾಮ ಮಹಾರಾಜ ಸ್ವಾಮೀಜಿ, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಮತ್ತು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಜ.ಪವಾರ ಅವರು ಬಂಜಾರ ಮಹಿಳೆಯರನ್ನು ಮಾತನಾಡಿಸಿದರು
ಕಾರ್ಯಕ್ರಮದಲ್ಲಿ ಸೇವಾಲಾಲ್‌ ಬಂಜಾರ ಶಕ್ತಿಪೀಠದ ಬಳಿರಾಮ ಮಹಾರಾಜ ಸ್ವಾಮೀಜಿ, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಮತ್ತು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಜ.ಪವಾರ ಅವರು ಬಂಜಾರ ಮಹಿಳೆಯರನ್ನು ಮಾತನಾಡಿಸಿದರು   

ಬೆಂಗಳೂರು: ‘ಸಾಮಾಜಿಕ ಭದ್ರತೆಯಿಲ್ಲದಿರುವುದರಿಂದ ಮತ್ತು ಕ್ರೈಸ್ತ ಮಿಷನರಿಗಳು ಆಮಿಷ ಒಡ್ಡುತ್ತಿರುವುದರಿಂದ ತಾಂಡಾ ಜನ ಮತಾಂತರಗೊಳ್ಳುತ್ತಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪೊಲೀಸರು ಇದನ್ನು ತಡೆಗಟ್ಟಬೇಕು’ ಎಂದು ಲೇಖಕಿ ಬಿ.ಟಿ. ಲಲಿತಾ ನಾಯಕ್‌ ಹೇಳಿದರು.

ಭಾರತೀಯ ಬಂಜಾರ ಸಂಘಟನಾ ಸಮಿತಿಯು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಬಂಜಾರಮತಾಂತರ ಪಿಡುಗು ಮತ್ತು ವಲಸೆ’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ಕಿತ್ತು ತಿನ್ನುವ ಬಡತನದಿಂದ ಮಕ್ಕಳನ್ನು ಸಾಕಲಾಗುತ್ತಿಲ್ಲ. ಹೀಗಾಗಿ ಅನ್ನ-ಬಟ್ಟೆಯನ್ನು ಅರಸಿ ಬಂಜಾರ ಸಮುದಾಯದವರು ಗುಳೆ ಹೋಗುತ್ತಿದ್ದಾರೆ’ ಎಂದರು.

‘ಬಂಜಾರರಿಗೆ ಮೂರು ಎಕರೆ ಕೃಷಿ ಜಮೀನು ನೀಡಬೇಕು ಮತ್ತು ಹೈನುಗಾರಿಕೆಗೆ ಆರ್ಥಿಕ ನೆರವು ನೀಡಿದರೆ ಬಂಜಾರರು ಗುಳೆ ಹೋಗು
ವುದು ತಪ್ಪುತ್ತದೆ. ಬಂಜಾರ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸಲು ಸರ್ಕಾರ, ಶಾಸಕರು ನೆರವಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಮಾಜದ ಮುಖಂಡ ಮನೋಹರ ಐನಾಪುರ, ‘ರಾಜ್ಯದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದವರ ಜನಸಂಖ್ಯೆ ಸುಮಾರು 35 ಲಕ್ಷದಷ್ಟಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಂಜಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಈ ಪ್ರದೇಶಗಳಲ್ಲೇ ಹೆಚ್ಚಾಗಿ ಮತಾಂತರಗೊಳ್ಳುತ್ತಿದ್ದಾರೆ. ಇದನ್ನು ಸಮಾವೇಶಗಳಿಂದ ತಡೆಯಲು ಸಾಧ್ಯವಿಲ್ಲ. ಬದಲಿಗೆ ಕ್ರೈಸ್ತರು, ಎಲ್ಲಿ, ಹೇಗೆ ನಮ್ಮವರನ್ನು ಮತಾಂತರಗೊಳಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹೆಚ್ಚಿ ಅದಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಲಿಂಗಸುಗೂರು ಶಾಖಾ ಮಠದ ವಿಜಯ ಮಹಾಂತೇಶ್ವರ ಸಂಸ್ಥಾನದ ಸಿದ್ದಲಿಂಗ ಸ್ವಾಮೀಜಿ, ಗಬ್ಬೂರವಾಡಿ ಶಕ್ತಿಪೀಠದ ಸೇವಾಲಾಲ್, ಬಂಜಾರ ಶಕ್ತಿಪೀಠದ ಬಳಿರಾಮ ಮಹಾರಾಜ, ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ, ಗುಲಬರ್ಗ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪಿ.ಕೆ. ಖಂಡೋಬಾ ಇದ್ದರು. ಅಧಿಕಾರಿಗಳು, ಸಾಧಕರನ್ನು ಸನ್ಮಾನಿಸಲಾಯಿತು.

ಸಚಿವ ಚವಾಣ್‌ ಗೈರು: ಆಕ್ರೋಶ

ಆಹ್ವಾನ ಪತ್ರಿಕೆಯಲ್ಲಿ ಪಶುಸಂಗೋಪಾನಾ ಸಚಿವ ಪ್ರಭುಚವಾಣ್ ಹೆಸರು ಮುದ್ರಿಸಲಾಗಿತ್ತು. ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಭಾರತೀಯ ಬಂಜಾರ ಸಂಘಟನಾ ಸಮಿತಿ ಖಂಡನೆ ವ್ಯಕ್ತಪಡಿಸಿತು.

‘ನಾವು ಸುಮ್ಮನಿರುವುದರಿಂದಲೇ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಹೋರಾಟದ ಮೂಲಕವೇ ನಾವು ನಮ್ಮ ಹಕ್ಕುಗಳನ್ನು ಪಡೆಯುಬೇಕಾಗಿದೆ. ಸಮುದಾಯಕ್ಕೆ ನಿಗದಿ ಪಡಿಸಿರುವ ಮೀಸಲಾತಿಯ ಪ್ರಮಾಣವನ್ನು ಶೇ 5ಕ್ಕೆ ಹೆಚ್ಚಿಸಲು ಒತ್ತಾಯಿಸಬೇಕು’ ಎಂದು ಸಮಿತಿ ನಿರ್ಣಯ ಕೈಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.