ADVERTISEMENT

ಬೆಂಗಳೂರು | ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಪ್ರಚೋದನೆ ಆರೋಪ: ಖುಲಾಸೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 21:28 IST
Last Updated 23 ಜುಲೈ 2025, 21:28 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದಿಸಿದ ಆರೋಪದಡಿ ಜಮಖಂಡಿಯ ಮೂವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಿಕ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿಗಳಾದ ಮುಸ್ತಾಫ ಬಿನ್‌ ಮುರ್ತಜ್‌ಸಾಬ್‌ ಮೊಮಿನ್‌ (27), ಅಲಿಸಾಬ್ ಬಿನ್ ಶಬ್ಬೀರ್‌ ಅಳಗುಂಡಿ (30) ಮತ್ತು ಸುಲೇಮಾನ್‌ ಬಿನ್‌ ರಿಯಾಜ್‌ ಅಹಮದ್‌ ಗಲಗಲಿ (25) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ವೆಂಕಟೇಶ್‌ ಟಿ.ನಾಯ್ಕ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಕಾಯ್ದೆ-2022ರ ಕಲಂ 4ರ ಅಡಿಯಲ್ಲಿ ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಪ್ರಚೋದನೆಗೆ ಒಳಗಾಗಿ ಮತಾಂತರಗೊಂಡ ವ್ಯಕ್ತಿಯ ರಕ್ತ ಸಂಬಂಧಿಕರು ಹಾಗೂ ಪೋಷಕರು ಮಾತ್ರವೇ ದೂರು ಸಲ್ಲಿಸಲು ಅಧಿಕಾರವಿರಲಿದೆ. ಈ ಪ್ರಕರಣದಲ್ಲಿ ದೂರು ದಾಖಲಿಸಿರುವ ವ್ಯಕ್ತಿ ಮೂರನೆಯವರಾಗಿದ್ದಾರೆ. ಅಂತೆಯೇ, ಅರ್ಜಿದಾರರ ವಿರುದ್ದ ಕಲಂ 3ರ ಅಡಿಯಲ್ಲಿ ತಿಳಿಸಿರುವಂತೆ ಮತಾಂತರಕ್ಕೆ ಪ್ರಚೋದನೆ ಮಾಡಿರುವ ಸಂಬಂಧ ಆರೋಪಗಳು ಇಲ್ಲವಾಗಿವೆ. ಹೀಗಾಗಿ, ಎಫ್‌ಐಆರ್‌ ಕಾನೂನುಬಾಹಿರ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಪ್ರಕರಣ ರದ್ದು ಗೊಳಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲರಾದ ಇಫ್ತೀಕರ್‌ ಶಹಾಪುರಿ ಮತ್ತು ಅನ್ವರ್ ಅಲಿ ಡಿ.ನದಾಫ್‌ ವಾದ ಮಂಡಿಸಿದ್ದರು.

ಪ್ರಕರಣವೇನು?: ದೂರುದಾರ ರಮೇಶ್‌ ಮಲ್ಲಪ್ಪ ನಾವಿ ಎಂಬುವರು 2025ರ ಮೇ 4ರಂದು ಸಂಜೆ 4.30ಕ್ಕೆ ಜಮಖಂಡಿಯ ರಾಮತೀರ್ಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಲವರು ಇಸ್ಲಾಂ ಧರ್ಮದ ಬೋಧನೆಯನ್ನು ಉತ್ತೇಜಿಸುವ ಮತ್ತು ಅವರ ಧಾರ್ಮಿಕ ನಂಬಿಕೆ ವಿವರಿಸುವ ಕರಪತ್ರಗಳನ್ನು ಹಂಚುತ್ತಾ, ‘ದುಬೈನಲ್ಲಿ ಉದ್ಯೋಗಾವಕಾಶ ಕಲ್ಪಿಸುತ್ತೇವೆ ಮತ್ತು ವಾಹನಗಳನ್ನು ನೀಡುತ್ತೇವೆ ಎಂದು ಜನರನ್ನು ಇಸ್ಲಾಂ ಧರ್ಮ ದೆಡೆ ಆಕರ್ಷಿತರನ್ನಾಗಿಸುತ್ತಿದ್ದಾರೆ’ ಎಂದು ದೂರು ನೀಡಿದ್ದರು.  ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 299, 351(2) 3(5) ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಕಾಯ್ದೆ–2024ರ ಕಲಂ 5ರ ಅಡಿ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.