
ಬೆಂಗಳೂರು: ‘ಕೆಲವು ಕಾವಿಧಾರಿಗಳು ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗುರುಗಳು ದೇವರಲ್ಲ, ಅವರೂ ನಮ್ಮಂತೆ ಮನುಷ್ಯರು’ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ್ ಅಭಿಪ್ರಾಯಪಟ್ಟರು.
ಬೆಂಗಳೂರು ಪ್ರೆಸ್ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವಂತೆ ವೀರಶೈವ, ಲಿಂಗಾಯತ ಧರ್ಮದ ಕೆಲ ಸ್ವಾಮೀಜಿಗಳು ಕರೆ ಕೊಟ್ಟಿದ್ದರು. ಸ್ವಾಮೀಜಿಗಳನ್ನು ಸೃಷ್ಟಿಸಿರುವುದೇ ಭಕ್ತರು. ಆ ಭಕ್ತರು ಹೇಳಿದಂತೆ ಸ್ವಾಮೀಜಿಗಳು ಕೇಳಬೇಕು. ಆದರೆ, ಕೆಲ ಸ್ವಾಮೀಜಿಗಳು ದಾರಿತಪ್ಪಿಸುತ್ತಿದ್ದಾರೆ. ಅವರಿಗೆ ತಮ್ಮ ನಡವಳಿಕೆ ಬಗ್ಗೆ ಅರಿವಿರಬೇಕು’ ಎಂದು ಹೇಳಿದರು.
‘ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಪ್ರಾರಂಭವಾದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹ 100 ಕೋಟಿ ಅನುದಾನ ನೀಡಿದ್ದರು. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದಾಗ, ನಿಗಮಕ್ಕೆ ₹ 300 ಕೋಟಿ ಅನುದಾನ ನೀಡಿದ್ದಾರೆ. ಈ ಹಣವನ್ನು ಸಮರ್ಪಕವಾಗಿ ಸಮುದಾಯದ ಯೋಜನೆಗಳಿಗೆ ಬಳಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಶರಣಬಸಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.