ADVERTISEMENT

ದೇಶವನ್ನು ಹಿಂದೂರಾಷ್ಟ್ರವಾಗಿಸುವ ಹುನ್ನಾರ: ದೊರೆಸ್ವಾಮಿ

ಗೌರಿ ಲಂಕೇಶ್‌ ಸ್ಮರಣೆ ಕಾರ್ಯಕ್ರಮದಲ್ಲಿ ಎಚ್.ಎಸ್. ದೊರೆಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 20:51 IST
Last Updated 4 ಸೆಪ್ಟೆಂಬರ್ 2020, 20:51 IST
ಎಚ್.ಎಸ್. ದೊರೆಸ್ವಾಮಿ 
ಎಚ್.ಎಸ್. ದೊರೆಸ್ವಾಮಿ    

ಬೆಂಗಳೂರು: ‘ಕೇಂದ್ರ ಸರ್ಕಾರವು ದೇಶದಲ್ಲಿ ಒಂದು ಭಾಷೆ, ಒಂದು ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ. ಮುಂದೆ, ದೇಶದಲ್ಲಿ ಒಂದೇ ಧರ್ಮ ಎಂಬ ನೀತಿ ತಂದು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವ ಹುನ್ನಾರ ಇದರ ಹಿಂದಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ದೂರಿದರು.

ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ಆನ್‍ಲೈನ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗೌರಿ ನೆನಹು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಂತ್ರಿಗಳು ಆಡಳಿತ ನಡೆಸುತ್ತಿಲ್ಲ. ಬದಲಿಗೆ, ಪಟ್ಟಭದ್ರ ಹಿತಾಸಕ್ತಿಗಳ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ. ಜನರು ಎಚ್ಚೆತ್ತುಕೊಳ್ಳಬೇಕು. ಇಂತಹ ಹುನ್ನಾರಗಳ ಈಡೇರಿಕೆಗೆ ಅವಕಾಶ ಕೊಡಬಾರದು’ ಎಂದರು.

‘ಗೌರಿಯಂತಹ ಧೀಮಂತ ಪತ್ರಕರ್ತೆಯನ್ನು ಕೆಲವು ಹಿಂದೂಗಳು ಹತ್ಯೆ ಮಾಡಿದರು. ಗೌರಿಯವರಿಗೆ ಲಕ್ಷಾಂತರ ಅಭಿಮಾನಿಗಳು ದೇಶದಾದ್ಯಂತ ಇದ್ದಾರೆ. ಅವರನ್ನು ಒಂದುಗೂಡಿಸಿ, ಸಂಘಟಿಸಿ, ಅವರ ಮೂಲಕ ಗೌರಿಯ ಆಶೋತ್ತರಗಳನ್ನು ಈಡೇರಿಸುವ ಕೆಲಸವಾಗಬೇಕಾಗಿದೆ’ ಎಂದರು.

ADVERTISEMENT

‘ದೇಶದ ಸಾರ್ವಭೌಮತ್ವವನ್ನು, ರಾಜ್ಯಾಂಗ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಲಿಷ್ಠ ಸಂಘಟನೆ ಕಟ್ಟಬೇಕಿದೆ’ ಎಂದೂ ಅವರು ಹೇಳಿದರು.

ಜೈಭೀಮ್ ಆರ್ಮಿಯ ರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ್ ಆಜಾದ್, ‘ನಮ್ಮ ದೇಶದಲ್ಲಿ ಯಥಾಸ್ಥಿತಿವಾದ, ಜಾತಿವಾದ, ಕೋಮುವಾದವನ್ನು ವಿರೋಧಿಸುತ್ತಲೇ ಬಂದಿರುವ ಮಹಿಳಾ ಪಡೆಯೇ ಇದೆ.ದೇಶದ ಸಾಕ್ಷರತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾವಿತ್ರಿಬಾಯಿ ಫುಲೆ, ರಮಾಬಾಯಿ ಸೇರಿದಂತೆ ಹಲವು ಆದರ್ಶ ಮಹಿಳೆಯರನ್ನು ದೇಶ ಕಂಡಿದೆ. ಆ ಪರಂಪರೆಯಲ್ಲಿ ಗೌರಿ ಲಂಕೇಶ್‍ ಅವರೂ ಸೇರಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಕೋಮುವಾದಿಗಳು ಗೌರಿ ಲಂಕೇಶ್‍ರವರನ್ನು ಹತ್ಯೆ ಮಾಡಿರಬಹುದು. ಆದರೆ, ಅವರ ಚಿಂತನೆಗಳು ಸದಾ ಇರುತ್ತವೆ. ಅವರು ಹಾಕಿಕೊಟ್ಟ ಮೌಲ್ಯಗಳಡಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಮುಖ್ಯವಾಗಿ ಧೈರ್ಯದಿಂದಕೋಮುವಾದಿಗಳನ್ನು ಎದುರಿಸಬೇಕಾಗಿದೆ’ ಎಂದು ಅವರು ಹೇಳಿದರು.

ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಹೋರಾಟಗಾರ ನೂರ್‌ ಶ್ರೀಧರ್, ಗೌರಿ ಮೀಡಿಯಾ ಟ್ರಸ್ಟ್‌ನ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.