ADVERTISEMENT

ಜಾಹೀರಾತುಗಳ ಕಬ್ಬಿಣದ ಚೌಕಟ್ಟು ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ

ಬಿಬಿಎಂಪಿ ಆಯುಕ್ತ ಆದೇಶ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 1:54 IST
Last Updated 23 ಅಕ್ಟೋಬರ್ 2020, 1:54 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್‌ಗಳ ಕಬ್ಬಿಣದ ಚೌಕಟ್ಟುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊರಾಂಗಣದಲ್ಲಿ ಅನಧಿಕೃತವಾಗಿ ಜಾಹೀರಾತು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ನ.3ರಂದು ನಡೆಸುತ್ತಿದೆ. ಅನಧಿಕೃತ ಜಾಹೀರಾತುಗಳನ್ನು ಹಾಗೂ ಅವುಗಳನ್ನು ಅಳವಡಿಸಲು ಬಳಸಿದ ಕಬ್ಬಿಣದ ಚೌಕಟ್ಟುಗಳನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಬಿಬಿಎಂಪಿಯು ನ. 28ರ ಒಳಗೆ ಹೈಕೋರ್ಟ್‌ಗೆ ವಿವರಣೆ ನೀಡಬೇಕಿದೆ.

‘ನ್ಯಾಯಾಲಯಕ್ಕೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗದಿದ್ದರೆ ಪಾಲಿಕೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಹಾಗಾಗಿ ಎಲ್ಲ ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ತಮ್ಮ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ಫಲಕಗಳು ಹಾಗೂ ಕಬ್ಬಿಣದ ಚೌಕಟ್ಟುಗಳ ಬಗ್ಗೆ ಸಮೀಕ್ಷೆ ನಡೆಸಬೇಕು’ ಎಂದು ಆಯುಕ್ತರು ಆಂತರಿಕ ಕಚೇರಿ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಹೀರಾತು ಫಲಕಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಹಾಗೂ ಕಬ್ಬಿಣದ ಚೌಕಟ್ಟುಗಳನ್ನು ತೆರವುಗೊಳಿಸಬೇಕು. ಅ.23ರ ಮಧ್ಯಾಹ್ನ 3ರ ಒಳಗೆ ಈ ಕುರಿತು ಸಹಾಯಕ ಆಯುಕ್ತರಿಗೆ (ಜಾಹೀರಾತು) ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ಆಯಾ ವಲಯದ ಜಂಟಿ ಆಯುಕ್ತರನ್ನು ಮತ್ತು ಮುಖ್ಯ ಎಂಜಿನಿಯರ್‌ಗಳನ್ನು ಹೊಣೆ ಮಾಡಲಾಗುವುದು’ ಎಂದೂ ಎಚ್ಚರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ 2018ರಲ್ಲಿ ಹೈಕೋರ್ಟ್‌, ನಗರದಲ್ಲಿ ಹೊರಾಂಗಣದಲ್ಲಿ ವಾಣಿಜ್ಯ ಉದ್ದೇಶಕ್ಕೆ ಹೋರ್ಡಿಂಗ್‌ ಅಳವಡಿಕೆಯನ್ನು ನಿಷೇಧಿಸುವಂತೆ ಸೂಚಿಸಿತ್ತು. ಈ ಆದೇಶಕ್ಕೆ ಪೂರಕವಾಗಿ ಬಿಬಿಎಂಪಿ ಹೊರಾಂಗಣ ಜಾಹೀರಾತು ಉಪನಿಯಮವನ್ನು ರೂಪಿಸಿ ಜಾರಿಗೊಳಿಸಿದೆ. ನಗರದಲ್ಲಿದ್ದ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳನ್ನು ತೆರವುಗೊಳಿಸಿದ್ದರೂ, ಅವುಗಳನ್ನು ಅಳವಡಿಸಲು ಬಳಸಿದ್ದ ಚೌಕಟ್ಟುಗಳು ಹಾಗೆಯೇ ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.