ADVERTISEMENT

ಬಾರ್‌ ಅಂಡ್‌ ರೆಸ್ಟೋರೆಂಟ್‌ ಜಪ್ತಿ

ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 18:59 IST
Last Updated 15 ಜುಲೈ 2019, 18:59 IST
   

ಬೆಂಗಳೂರು: ‘ಶಬ್ದ ಮಾಲಿನ್ಯ ಆರೋಪದ ಮೇರೆಗೆ ಇಂದಿರಾನಗರದ ಡಿಫೆನ್ಸ್‌ ಕಾಲೋನಿ ನೂರು ಅಡಿ ರಸ್ತೆಯಲ್ಲಿರುವ ಟಿಪ್ಲರ್ ಬಾರ್ ಅಂಡ್ ರೆಸ್ಟೋರೆಂಟ್‌ ಅನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ.

ಮಿತಿ ಮೀರಿದ ಶಬ್ದ ಮಾಲಿನ್ಯ ಆರೋಪಕ್ಕೆ ಸಂಬಂಧಿಸಿದಂತೆ ಇಂದಿರಾನಗರದ ರಾಜ್‌ಕುಮಾರ್‌ ಪಿಳ್ಳೈ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಈ ಕುರಿತಂತೆ ಬಿಬಿಎಂಪಿಯ ಪೂರ್ವ ವಲಯದ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

ಪತ್ರದಲ್ಲೇನಿದೆ?: ‘ಪಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಂದ ಉಂಟಾಗುತ್ತಿರುವ ಮಿತಿ ಮೀರಿದ ಶಬ್ದ ಮಾಲಿನ್ಯ ಆರೋಪಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆಗೂಡಿ ಆರೋಪ ಬಂದ ಪ್ರದೇಶಗಳ ವ್ಯಾಪ್ತಿಯಲ್ಲಿ 2017ರ ಜನವರಿ 7 ಮತ್ತು 2018ರ ಜನವರಿ 12ರಂದು ದಿಢೀರ್ ಪರಿಶೀಲನೆ ನಡೆಸಲಾಗಿದೆ’ ಎಂದು ತಿಳಿಸಲಾಗಿದೆ.

‘ಅಂತೆಯೇ ಹೈಕೋರ್ಟ್‌ ನಿರ್ದೇಶನದ ಅನುಸಾರ ಇದೇ 3ರಂದು ನಡೆಸಲಾದ ಪರಿಶೀಲನೆ ವೇಳೆಯಲ್ಲಿ ಟಿಪ್ಲರ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಅನ್ನು ಶಬ್ದ ಮಾಲಿನ್ಯ ನಿಯಂತ್ರಣದ ಆಧಾರದಲ್ಲಿ ಕರ್ನಾಟಕ ಪೌರಾಡಳಿತ ಕಾಯ್ದೆ-1976ರ ಕಲಂ 321 (1) ಮತ್ತು 321 (2)ರ ಅನುಸಾರ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಲಾಗಿದೆ. ವಿಚಾರಣೆಯನ್ನು ಆಗಸ್ಟ್‌ 13ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.