ಬೆಂಗಳೂರು: ‘ಅಸಾಂವಿಧಾನಿಕ ಬುದ್ಧಗಯಾ ಟ್ರಸ್ಟ್ (ಬಿ.ಟಿ) ಕಾಯ್ದೆ–1949 ರದ್ದುಗೊಳಿಸಬೇಕು. ಬಿಹಾರದ ಬುದ್ಧಗಯಾ ಮಹಾಬೋಧಿ ಮಹಾವಿಹಾರದ ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ಬೌದ್ಧರಿಗೆ ನೀಡಬೇಕು’ ಎಂದು ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂನ ಪ್ರಧಾನ ಕಾರ್ಯದರ್ಶಿ ಆಕಾಶ್ ಲಾಮಾ ಆಗ್ರಹಿಸಿದರು.
ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಗುರುವಾರ ಆಯೋಜಿಸಿದ್ದ ಕರ್ನಾಟಕ ಬೌದ್ಧರ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಸ್ವಾತಂತ್ರ್ಯ ನಂತರ ಬಿ.ಟಿ–1949 ಕಾಯ್ದೆ ರಚಿಸಲಾಗಿತ್ತು. ಈ ಕಾಯ್ದೆಯಡಿ ಬಿಹಾರದ ಗಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಾಲ್ವರು ಬೌದ್ಧರು, ನಾಲ್ವರು ಹಿಂದೂಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಇದರಿಂದ ಬೌದ್ಧರಿಗೆ ಅನ್ಯಾಯವಾಗಿದೆ’ ಎಂದು ದೂರಿದರು.
‘ಸಂವಿಧಾನದ ಪ್ರಕಾರ ಸಿಖ್, ಮುಸ್ಲಿಂ, ಹಿಂದೂ ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ. ಆದರೆ, ಬೌದ್ಧರ ಧಾರ್ಮಿಕ ಕೇಂದ್ರದಲ್ಲಿ ಹಿಂದೂಗಳು ಆಡಳಿತ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇಶದಲ್ಲಿ 84 ಸಾವಿರ ಬುದ್ಧ ವಿಹಾರಗಳು ಬೇರೆ ಸಮುದಾಯಗಳ ವಶದಲ್ಲಿವೆ. ಅವುಗಳನ್ನು ಮರಳಿ ಪಡೆದುಕೊಳ್ಳಲು ದೇಶದಾದ್ಯಂತ ಜನಾಂದೋಲನ ರೂಪಿಸಬೇಕು. ಈ ನಿಟ್ಟಿನಲ್ಲಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರವನ್ನು ಹಿಂದೂಗಳ ಕಪಿಮುಷ್ಠಿಯಿಂದ ಹಿಂಪಡೆದುಕೊಳ್ಳಲು 128 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ’ ಎಂದು ಹೇಳಿದರು.
‘ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬಿ.ಟಿ ಕಾಯ್ದೆ–1949 ರದ್ದುಗೊಳಿಸಬೇಕು. ಬುದ್ಧ ಗಯಾದಲ್ಲಿ ಬೌದ್ಧ ಧರ್ಮಕ್ಕೆ ಸೇರದವರನ್ನು ಹೊರಗಿಟ್ಟು ಮಹಾಬೋಧಿ ಮಹಾವಿಹಾರ ಆಡಳಿತವನ್ನು ಬೌದ್ಧರಿಗೆ ವಹಿಸಿಕೊಡಬೇಕು’ ಎಂದು ಆಗ್ರಹಿಸಿದರು.
ಫೋರಂ ಸಲಹೆಗಾರ ಚಂದ್ರಕೀರ್ತಿ, ಭಾರತೀಯ ಬೌದ್ಧಬೋಧಿ ಮಹಾಸಭಾದ ಅಧ್ಯಕ್ಷ ಚಂದ್ರಬೋಧಿ ಪಾಟೀಲ್, ಉಪಾಧ್ಯಕ್ಷ ಎಂ. ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮೂರ್ತಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಆರ್. ಮೋಹನ್‌ರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.