ಕಳ್ಳತನ
ಬೆಂಗಳೂರು: ಜೈಲಿನಿಂದ ಹೊರ ಬಂದ ಬಳಿಕ ಒಟ್ಟಾಗಿ ಮನೆ ಕಳ್ಳತನ ಮಾಡುತ್ತಿದ್ದ ಮೂವರನ್ನು ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ತಿಲಕ್‌ನಗರದ ನಿವಾಸಿಗಳಾದ ಬಾಲರಾಜ್, ಗೌರವ್, ಪ್ರವೀಣ್ ಎಂಬುವರನ್ನು ಬಂಧಿಸಿ, 257 ಗ್ರಾಂ ಚಿನ್ನಾಭರಣ, ಮೊಬೈಲ್ ಸೇರಿ ₹31.27 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಲರಾಜ್ ಆರೋಪಿಯಾಗಿದ್ದು, ವಿವಿಧ ಠಾಣೆಗಳಲ್ಲಿ ಅವರ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.
ಬಾಲರಾಜ್ ಜೈಲಿನಲ್ಲಿದ್ದ ವೇಳೆ ಗೌರವ್ ಹಾಗೂ ಪ್ರವೀಣ್ ಪರಿಚಯವಾಗಿದ್ದಾರೆ. ಹಲವು ಕಳ್ಳತನ, ದರೋಡೆ ಪ್ರಕರಣದಲ್ಲಿ ಇವರು ಜೈಲು ಸೇರಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಒಟ್ಟಿಗೆ ಕಳ್ಳತನ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಹೇಳಿದರು.
ನವೆಂಬರ್ 17ರಂದು ಬೈರಸಂದ್ರ 1ನೇ ಕ್ರಾಸ್ ನಿವಾಸಿಯೊಬ್ಬರು ಮನೆಯ ಸಮೀಪದ ಸ್ನೇಹಿತನ ಮನೆಗೆ ಹೋಗಿದ್ದರು. ಆಗ ಮನೆಯ ಬೀಗ ಒಡೆದು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ಹಳೆ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಈ ಪೈಕಿ ಆರೋಪಿಯೊಬ್ಬ ಕಳ್ಳತನ ಮಾಡಿರುವುದು ಗೊತ್ತಾಯಿತು. ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ತಿಲಕ್ ನಗರದ ಬಿಟಿಪಿ ಪ್ರದೇಶದಲ್ಲಿ ಚಿನ್ನದ ನಕ್ಲೇಸ್ ಸಮೇತ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದರು.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತಿಬ್ಬರು ಸಹಚರರೊಂದಿಗೆ ಸೇರಿ ಚಿನ್ನಾಭರಣ, ಬೆಳ್ಳಿಯ ವಸ್ತು ಹಾಗೂ ನಗದು ಕಳವು ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಗಳಿಂದ ಕಳವು ಮಾಡಿದ್ದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.