ADVERTISEMENT

ಮುಳುಗಡೆ ಪ್ರದೇಶ: ಸಂತ್ರಸ್ತರಿಗೆ ಸಿಗಲಿದೆ ಬದಲಿ ನಿವೇಶನ

ನಾಡಪ್ರಭು ಕೆಂಪೇಗೌಡ ಬಡಾವಣೆ: ಜಲಾವೃತ ಪ್ರದೇಶದಲ್ಲಿವೆ 800ಕ್ಕೂ ಅಧಿಕ ನಿವೇಶನಗಳು

ಪ್ರವೀಣ ಕುಮಾರ್ ಪಿ.ವಿ.
Published 18 ಅಕ್ಟೋಬರ್ 2021, 20:09 IST
Last Updated 18 ಅಕ್ಟೋಬರ್ 2021, 20:09 IST
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕನ್ನಹಳ್ಳಿ ಕೆರೆ ಸಮೀಪದ ನಿವೇಶನಗಳ ಮೂಲಸೌಕರ್ಯ ಕೊಳವೆ ಮಾರ್ಗದಲ್ಲಿ ನೀರು ನಿಂತಿರುವುದು- --– ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕನ್ನಹಳ್ಳಿ ಕೆರೆ ಸಮೀಪದ ನಿವೇಶನಗಳ ಮೂಲಸೌಕರ್ಯ ಕೊಳವೆ ಮಾರ್ಗದಲ್ಲಿ ನೀರು ನಿಂತಿರುವುದು- --– ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕನ್ನಹಳ್ಳಿ ಕೆರೆ ಸಮೀಪದಲ್ಲಿ ಹಂಚಿಕೆಯಾಗಿದ್ದ ನಿವೇಶನಗಳ ಮುಳುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ನೀರು ನಿಲ್ಲುವ ಪ್ರದೇಶವನ್ನು ಉದ್ಯಾನ ನಿರ್ಮಾಣಕ್ಕೆ ಬಳಸಿಕೊಂಡು, ಇಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಿ ನಿವೇಶನ ನೀಡಲು ಬಿಡಿಎ ಮುಂದಾಗಿದೆ.

ಇತ್ತೀಚೆಗೆ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಎಷ್ಟು ಬದಲಿ ನಿವೇಶನ ನೀಡಬೇಕಾಗುತ್ತದೆ ಎಂಬ ಬಗ್ಗೆ ಪ್ರಸ್ತಾವ ಸಿದ್ಧಪಡಿಸುವಂತೆ ಎಂಜಿನಿಯರಿಂಗ್‌ ವಿಭಾಗಕ್ಕೆ ಸೂಚಿಸಲಾಗಿದೆ.

ಕನ್ನಹಳ್ಳಿ ಕೆರೆಯ ಬಳಿ ಬ್ಲಾಕ್‌ 1ನ ಎಲ್‌ ಸೆಕ್ಟರ್‌ ಹಾಗೂ ಬ್ಲಾಕ್‌ 2ರ ಎ, ಬಿ ಹಾಗೂ ಎಚ್‌ ಸೆಕ್ಟರ್‌ಗಳಲ್ಲಿ 500ಕ್ಕೂ ಅಧಿಕ ನಿವೇಶನಗಳಿರುವ ಪ್ರದೇಶ ಮಳೆಗಾಲದಲ್ಲಿ ಜಲಾವೃತವಾಗುತ್ತವೆ. ಇಲ್ಲಿ ಕೆಲವು ನಿವೇಶನಗಳಲ್ಲಿ ಎರಡು– ಮೂರು ಅಡಿಗಳಷ್ಟು ಆಳಕ್ಕೆ ಅಗೆದಾಗಲೂ ನೀರಿನ ಒರತೆ ಒಸರುತ್ತಿದೆ. ಇಲ್ಲಿ ಮನೆ ಕಟ್ಟಲಾಗದ ಸ್ಥಿತಿ ಇದೆ. ಈ ಬಗ್ಗೆ ‘ಪ್ರಜಾವಾಣಿ’ ಗಮನ ಸೆಳೆದಿತ್ತು.

ADVERTISEMENT

ಒಂದೋ ಇಲ್ಲಿ ನೀರು ನಿಲ್ಲದಂತೆ ತಡೆಯಲು ಕಾಲುವೆ ವ್ಯವಸ್ಥೆಯನ್ನು ಪುನರ್‌ ರೂಪಿಸಬೇಕು ಅಥವಾ ಇಲ್ಲಿ ನಿವೇಶನಹಂಚಿಕೆಯಾಗಿರುವವರಿಗೆ ಬದಲಿ ನಿವೇಶನ ನೀಡಬೇಕು ಎಂದು ಸಂತ್ರಸ್ತರು ಮೂರು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದಿರುವ ಬಿಡಿಎ ಕೊನೆಗೂ ಬದಲಿ ನಿವೇಶನ ನೀಡುವ ನಿರ್ಧಾರಕ್ಕೆ ಬಂದಿದೆ.

‘ಜಲಾವೃತ ನಿವೇಶನಗಳಿಗೆ ಬದಲಿ ನಿವೇಶನ ನೀಡುವ ಪ್ರಸ್ತಾವಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ’ ಎಂದು ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಹಳ್ಳಿ ಕೆರೆಯ ಕೆಳಗಿನ 40 ಎಕರೆಗಳಷ್ಟು ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈ ಪ್ರದೇಶವನ್ನು ಉದ್ಯಾನ ನಿರ್ಮಾಣಕ್ಕೆ ಬಳಸಿ, ಬೇರೆ ಕಡೆ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ಬದಲಿ ನಿವೇಶನ ಹಂಚಿಕೆಗೆ ಬಳಸಲಿದ್ದೇವೆ. ಕೆರೆ ಸಮೀಪದ ಜಾಗದಲ್ಲಿ ನೀರಿನ ಒರತೆ ಚೆನ್ನಾಗಿರು
ವುದರಿಂದ ಅಲ್ಲಿ ಗಿಡಗಳು ಚೆನ್ನಾಗಿ ಬೆಳೆಯಲಿವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ತಿಳಿಸಿದರು.

‘800 ಫಲಾನುಭವಿಗಳಿಗೆ ಬದಲಿ ನಿವೇಶನಗಳ್ನು ನೀಡಬೇಕಾದೀತು ಎಂದು ಅಂದಾಜಿಸಿದ್ದೇವೆ. ಇಲ್ಲಿನ ಭೌಗೋಳಿಕ ಸ್ಥಿತಿಗತಿ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.