ADVERTISEMENT

ಅಪಘಾತ: ರಸ್ತೆ ಸುರಕ್ಷತಾ ನೀತಿ ವಿಫಲ

ಮಹಾಲೇಖಪಾಲರ ವರದಿಯಲ್ಲಿ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 4:29 IST
Last Updated 17 ಮಾರ್ಚ್ 2022, 4:29 IST

ಬೆಂಗಳೂರು: ರಸ್ತೆ ಅಪಘಾತಗಳನ್ನು ಶೇ 25ರಷ್ಟು ಹಾಗೂ ರಸ್ತೆ ಅಪಘಾತದಿಂದ ಸಂಭವಿಸುವ ಸಾವುಗಳನ್ನು ಶೇ 30ರಷ್ಟು ಕಡಿಮೆ ಮಾಡುವ ಗುರಿಯನ್ನು ಐದು ವರ್ಷಗಳಲ್ಲಿ ಸಾಧಿಸುವಲ್ಲಿ ‘ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನೀತಿ–2015’ ವಿಫಲವಾಗಿದೆ ಎಂದು ಮಹಾಲೇಖಪಾಲರ ವರದಿ ಆಕ್ಷೇಪ ವ್ಯಕ್ತಪಡಿಸಿದೆ.

ಕರ್ನಾಟಕ ರಾಜ್ಯ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಕುರಿತ ಮಹಾಲೇಖಪಾಲರ ವರದಿಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

‘2015ಕ್ಕೆ ಹೋಲಿಸಿದರೆ ಅಪಘಾತಗಳ ಪ್ರಮಾಣವು 2020ರಲ್ಲಿ ಶೇ 22.34ರಷ್ಟು, ಗಾಯಾಳುಗಳ ಸಂಖ್ಯೆಯು ಶೇ 30.70ರಷ್ಟು ಹಾಗೂ ಅಪಘಾತದಿಂದಾಗುವ ಸಾವಿನ ಪ್ರಮಾಣ ಶೇ 10.1ರಷ್ಟು ಇಳಿಕೆಯಾಗಿದೆ’ ಎಂದು ಪ್ರಾಧಿಕಾರವು ಹೇಳಿಕೊಂಡಿದೆ. ಆದರೆ, 2019ರವರೆಗೆ ಅಪಘಾತಗಳ ಪ್ರಮಾಣದಲ್ಲಿ ಯಾವುದೇ ಗಮನಾರ್ಹ ಇಳಿಕೆಯಾಗಿರುವುದು ಕಂಡುಬಂದಿಲ್ಲ. ಆದರೆ, 2020ರಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಸಮಯದಲ್ಲಿ ಅಪಘಾತಗಳ ಪ್ರಮಾಣ ಶೇ 75ರಷ್ಟು ಕಡಿಮೆ ಆಗಿದೆ. ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕ ಈ ಪ್ರಮಾಣವು ಮತ್ತೆ ಏರಿಕೆ ಕಂಡಿದೆ. ಹಾಗಾಗಿ ರಸ್ತೆ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಪ್ರಾಧಿಕಾರವು ವಿಫಲವಾಗಿದೆ.ರಸ್ತೆಗಳ ಕೆಟ್ಟ ಪರಿಸ್ಥಿತಿ ಹಾಗೂ ಅವು ಅಪಾಯಕಾರಿಯಾಗಿರುವುದರಿಂದ ಅಪಘಾತಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ADVERTISEMENT

ನೀತಿ ಹಾಗೂ ಅದರ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಭಾರಿ ಅಂತರ ಇದೆ. 2017ರಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ ಜಾರಿಯಾದ ಬಳಿಕವೂ ಪ್ರಾಧಿಕಾರವು ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇನ್ನೂ ನಿಯಮಗಳನ್ನೇ ರೂಪಿಸಿಲ್ಲ. ಜಿಲ್ಲೆಗಳಲ್ಲಿ ಆರೈಕೆ ಕೇಂದ್ರಗಳನ್ನು (ಟಿಸಿಸಿ) ಸ್ಥಾಪಿಸಲು ಕ್ರಿಯಾಯೋಜನೆ ರೂಪಿಸಿಲ್ಲ. ಸ್ಥಾಪಿಸಲಾದ ಟಿಸಿಸಿಗಳಲ್ಲಿ ನರರೋಗ ತಜ್ಞರ ಸೇವೆ ಲಭ್ಯ ಇಲ್ಲ ಎಂಬುದನ್ನು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.

‘ಬಳಕೆಯಾಗದ ₹ 470 ಕೋಟಿ’

ರಸ್ತೆ ಸುರಕ್ಷತಾ ನಿಧಿಯನ್ನು 2020ರ ಅ.27ರಂದು ಸ್ಥಾಪಿಸಲಾಗಿದೆ. 2017ರಿಂದ 2020ರ ನಡುವೆ ಸೆಸ್‌ ರೂಪದಲ್ಲಿ ಸಂಗ್ರಹವಾಗಿದ್ದ ₹ 480.50 ಕೋಟಿಯನ್ನು ಈ ನಿಧಿಗೆ ವರ್ಗಾಯಿಸಲಾಗಿದೆ. ಆದರೆ, ಪ್ರಾಧಿಕಾರವು ಇದರಲ್ಲಿ ₹10.92 ಕೋಟಿಯನ್ನು ಮಾತ್ರ ಬಳಸಿಕೊಂಡಿದೆ. ಈ ಮೊತ್ತವನ್ನೂ ಪೊಲೀಸ್‌ ಹಾಗೂ ಸಾರಿಗೆ ಇಲಾಖೆಗಳಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. ಹೆದ್ದಾರಿಗಳಲ್ಲಿ ಸಂಚಾರ ದ್ವೀಪ, ರಸ್ತೆ ವಿಭಜಕ ನಿರ್ಮಾಣ, ತೀವ್ರ ತಿರುವುಗಳ ಸುಧಾರಣೆ, ಅಪಘಾತ ಸಂಭವಿಸುವ ಅಪಾಯಕಾರಿ ಸ್ಥಳಗಳಲ್ಲಿನ (ಹಾಟ್ಸ್ಪಾಟ್‌) ಲೋಪ ಗುರುತಿಸಿ ಸರಿಪಡಿಸುವ ಕಾರ್ಯಗಳಿಗೆ ಈ ನಿಧಿಯಿಂದ ಹಣವನ್ನೇ ಒದಗಿಸಿಲ್ಲ. ಹೆದ್ದಾರಿಗಳ ಬಳಿ ಆಘಾತ ಆರೈಕೆ ಕೇಂದ್ರ (ಟ್ರಾಮಾ ಸೆಂಟರ್) ಸ್ಥಾಪನೆಗೆ ಮತ್ತು ವೈದ್ಯಕೀಯ ಮೂಲಸೌಕರ್ಯ ವೃದ್ಧಿಗಾಗಿ ಆರೋಗ್ಯ ಇಲಾಖೆಗೂ ಹಣ ಒದಗಿಸಿಲ್ಲ ಎಂದು ಮಹಾಲೇಖಪಾಲರ ವರದಿ ಆಕ್ಷೇಪಿಸಿದೆ.

ಪ್ರಮುಖ ಶಿಫಾರಸುಗಳು

l ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾಯ್ದೆ 2017ರ ಅಡಿ ನಿಯಮಗಳನ್ನು ಅಂತಿಮಗೊಳಿಸಬೇಕು

lಸುರಕ್ಷಿತ ಚಾಲನೆ ಮಹತ್ವದ ಅರಿವು ಮೂಡಿಸಬೇಕು ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಬೇಕು

l ಪ್ರಾಧಿಕಾರವು ರಸ್ತೆ ನಿರ್ವಹಣಾ ಸಂಸ್ಥೆಗಳಿಗೆ ಗುರಿ ನಿಗದಿಪಡಿಸಿ, ನಿಖರ ಮೇಲ್ವಿಚಾರಣೆಗಾಗಿ ಅವುಗಳಿಂದ ಅನುಪಾಲನಾ ವರದಿ ಪಡೆಯಬೇಕು

l ಅಪಘಾತಕ್ಕೊಳಗಾದವರು 30 ನಿಮಿಷಗಳೊಳಗೆ (ಗೋಲ್ಡ್‌ ಹವರ್‌) ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ತಜ್ಞರನ್ನು ಒಳಗೊಂಡ ಟಿಸಿಸಿ ಸ್ಥಾಪಿಸಬೇಕು

ಪ್ರಮುಖ ಶಿಫಾರಸುಗಳು

l ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾಯ್ದೆ 2017ರ ಅಡಿ ನಿಯಮಗಳನ್ನು ಅಂತಿಮಗೊಳಿಸಬೇಕು

lಸುರಕ್ಷಿತ ಚಾಲನೆ ಮಹತ್ವದ ಅರಿವು ಮೂಡಿಸಬೇಕು ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಬೇಕು

l ಪ್ರಾಧಿಕಾರವು ರಸ್ತೆ ನಿರ್ವಹಣಾ ಸಂಸ್ಥೆಗಳಿಗೆ ಗುರಿ ನಿಗದಿಪಡಿಸಿ, ನಿಖರ ಮೇಲ್ವಿಚಾರಣೆಗಾಗಿ ಅವುಗಳಿಂದ ಅನುಪಾಲನಾ ವರದಿ ಪಡೆಯಬೇಕು

l ಅಪಘಾತಕ್ಕೊಳಗಾದವರು 30 ನಿಮಿಷಗಳೊಳಗೆ (ಗೋಲ್ಡ್‌ ಹವರ್‌) ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ತಜ್ಞರನ್ನು ಒಳಗೊಂಡ ಟಿಸಿಸಿ ಸ್ಥಾಪಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.