
ಬೆಂಗಳೂರು: ನಗರದ ಮಾಣೆಕ್ ಷಾ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದ ಪಥ ಸಂಚಲನ, ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು. ದೇಶಪ್ರೇಮದ ಗೌರವ ಜತೆಗೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯೂ ಆಯಿತು.
ಪೊಲೀಸ್, ಭಾರತೀಯ ವಾಯು ಸೇನೆ, ಸೇವಾದಳ, ವಾದ್ಯತಂಡ, ಎನ್‌ಸಿಸಿ, ಎನ್ಎಸ್‌ಎಸ್ ಜತೆಗೆ ವಿದ್ಯಾರ್ಥಿ ತಂಡದವರು ಆಕರ್ಷಕ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.
ಸಮರ್ಥನಂ ಶಾಲೆ, ರಮಣ ಮಹರ್ಷಿ ಅಂಧರ ಕೇಂದ್ರದ ಮಕ್ಕಳು ಆತ್ಮವಿಶ್ವಾಸದಿಂದಲೇ ಪಥಸಂಚಲನದಲ್ಲಿ ಪಾಲ್ಗೊಂಡರು. ಅತಿಥಿಗಳಾಗಿ ಬಂದಿದ್ದ ತಮಿಳುನಾಡು ರಾಜ್ಯ ಪೊಲೀಸ್ ಪಡೆ ಸೇರಿ 40ಕ್ಕೂ ಹೆಚ್ಚು ತಂಡಗಳಿಂದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸಿದರು. 1,326 ಮಂದಿ 15 ನಿಮಿಷದ ಪಥ ಸಂಚಲನದಲ್ಲಿ ಭಾಗಿಯಾದರು.
ಬಳಿಕ ಹೆರೋಹಳ್ಳಿಯ ಸಂಯುಕ್ತ ಪದವಿಪೂರ್ವ ಕಾಲೇಜಿನ 650 ವಿದ್ಯಾರ್ಥಿಗಳು ಸಂಕ್ರಾಂತಿ ಸಡಗರಕ್ಕೆ ನೃತ್ಯ ರೂಪ ನೀಡಿ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸಿದರು. ಬಾಗಲಗುಂಟೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಭಾರತದ ಏಕೀಕರಣ ಹಾಗೂ ನವಭಾರತ ವೈಭವವನ್ನು ಕಟ್ಟಿಕೊಟ್ಟರೆ, ಸಾಮೂಹಿಕ ಮೇಳದಲ್ಲಿ ಪೊಲೀಸ್ ವಾದ್ಯಗಳ ಸಂಗೀತ ನಿನಾದವೂ ಗಮನ ಸೆಳೆಯಿತು.
ಬಹುಮಾನ ವಿತರಣೆ: ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಸುಮಾರು 20 ತಂಡಗಳಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನ ವಿತರಿಸಲಾಯಿತು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರ ಪೊಲೀಸ್ ಕಮೀಷನರ್ ಸೀಮಾಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಜರಿದ್ದರು.
ಕೇಂದ್ರ ಕಾರಾಗೃಹದ ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳನ್ನು ರಾಜ್ಯಪಾಲರು, ಮುಖ್ಯಮಂತ್ರಿ ಸಹಿತ ಗಣ್ಯರು ಹಾಗೂ ಅತಿಥಿಗಳು ಸವಿದಿದ್ದು ವಿಶೇಷವಾಗಿತ್ತು.
‘ಬೆಂಗಳೂರು ಮಹಾನಗರದ ಅಭಿವೃದ್ದಿಗೆ ₹1.5 ಲಕ್ಷ ಕೋಟಿಯ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ’ ಎಂದು ತಮ್ಮ ಭಾಷಣದಲ್ಲಿ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಉಲ್ಲೇಖಿಸಿದರು. ‘ಮೆಟ್ರೊ ಸಂಪರ್ಕ ಜಾಲ ವ್ಯವಸ್ಥಿತವಾಗಿ ವಿಸ್ತರಿಸಲಾಗುತ್ತಿದೆ. 110 ಗ್ರಾಮಗಳಿಗೆ ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಸರಬರಾಜು ಆರಂಭಿಸಲಾಗಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಪ್ರಗತಿಯೂ ಶುರುವಾಗಿದ್ದು ನಗರ ಸಾರಿಗೆ ವ್ಯವಸ್ಥೆ ಸುಧಾರಿಸಲಾಗುತ್ತಿದೆ’ ಎಂದರು. ‘ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಬೆಂಗಳೂರು ನಗರ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎನ್ನುವುದನ್ನು ಸಮೀಕ್ಷೆಗಳು ಹೇಳುತ್ತಿವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.