
ಬೆಂಗಳೂರು: ನಗರದಲ್ಲಿ ಸೋಮವಾರ ವಿವಿಧೆಡೆ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯ: ವಿಶ್ವವಿದ್ಯಾಲಯಗಳು ಉತ್ತಮ ಶಿಕ್ಷಣ ಮತ್ತು ಕೌಶಲದ ಜೊತೆ ನೈತಿಕತೆ, ಸಾಮಾಜಿಕ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವಂತಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಜಯಕರ ಎಸ್.ಎಂ ತಿಳಿಸಿದರು.
ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ತ್ಯಾಗ,ಬಲಿದಾನಗಳಿಂದ ನಿರ್ಮಾಣವಾದ ಭಾರತ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆದರ್ಶಗಳಿಂದ ಜೀವಂತವಾಗಿದೆ’ ಎಂದು ತಿಳಿಸಿದರು.
ಮೌಲ್ಯಮಾಪನ ಕುಲಸಚಿವ ಸಿ.ಎಸ್.ಕರಿಗಾರ್, ವಿತ್ತಾಧಿಕಾರಿ ಸುನೀತಾ, ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಗರ ವಿಶ್ವವಿದ್ಯಾಲಯ: ಮನಮೋಹನಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್. ಎ. ಅಹಮದ್ ಅವರು ಮಾತನಾಡಿ, ‘ಶಿಕ್ಷಣದ ಮಟ್ಟ ಹೆಚ್ಚಾಗುತ್ತಿದ್ದರೂ ಮಾನವೀಯ ಮೌಲ್ಯಗಳಲ್ಲಿ ಕುಸಿತ ಕಂಡುಬರುತ್ತಿರುವುದು ಆತಂಕಕಾರಿ ವಿಷಯ’ ಎಂದು ತಿಳಿಸಿದರು.
ಕುಲಪತಿ ಬಿ.ರಮೇಶ್, ಕುಲಸಚಿವ ಎ.ನವೀನ್ ಜೋಸೆಫ್, ಪ್ರಸಾರಾಂಗ ನಿರ್ದೇಶಕ ತಾಂಡವಗೌಡ ಉಪಸ್ಥಿತರಿದ್ದರು.
ಕೆಎಸ್‌ಆರ್‌ಟಿಸಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ನಂದಿನಿದೇವಿ ಕೆ. ಧ್ವಜಾರೋಹಣ ನೆರವೇರಿಸಿದರು.
ಮಹಾತ್ಮ ಗಾಂಧೀಜಿ, ಬಿ.ಆರ್. ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ರೈಲ್ವೆ: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವತಿಯಿಂದ ಎಂ.ಜಿ. ಕಾಲೊನಿ ರೈಲ್ವೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್‌ಕುಮಾರ್ ಸಿಂಗ್ ಧ್ವಜಾರೋಹಣ ನೆರವೇರಿಸಿದರು.
2025 ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ, ನೈಋತ್ಯ ರೈಲ್ವೆಯ ಒಟ್ಟು ಆದಾಯ ₹6,939 ಕೋಟಿಗಳಾಗಿದ್ದು ಇದು ಕಳೆದ ವರ್ಷಕ್ಕಿಂತ ಶೇ 16ರಷ್ಟು ಹೆಚ್ಚಾಗಿದೆ. ಪ್ರಯಾಣಿಕರ ಆದಾಯ ₹2,543 ಕೋಟಿ ಹಾಗೂ ಸರಕು ಸಾಗಣೆ ಆದಾಯವು ₹3,976 ಕೋಟಿಗಳಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ ಪೂರಿಯಾ, ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಶ್ರೇಯಾನ್ಸ್ ಚಿಂಚ್ವಾಡೆ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಬೆಂಗಳೂರು ವಿಭಾಗದ ಅಧ್ಯಕ್ಷೆ ರೀನಾ ಸಿಂಗ್ ಉಪಸ್ಥಿತರಿದ್ದರು.
ಜಿಕೆವಿಕೆ ಆವರಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಸ್. ವಿ. ಸುರೇಶ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಮೇಜರ್ ಎಂ. ರಘು ರಾಮರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಜಿಬಿಎ ಕೇಂದ್ರ ಕಚೇರಿಯಲ್ಲಿ ಆಚರಣೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ ಆವರಣದಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಧ್ವಜಾರೋಹಣ ನೆರವೇರಿಸಿದರು. ಮಹಾತ್ಮಗಾಂಧಿ ಹಾಗೂ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು. ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಕೆ. ಹರೀಶ್ ಕುಮಾರ್ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್ ಜಂಟಿ ಆಯುಕ್ತೆ ಲಕ್ಷ್ಮಿದೇವಿ ಆಡಳಿತ ಉಪ ಆಯುಕ್ತ ರವೀಂದ್ರ ಭಾಗವಹಿಸಿದ್ದರು. ವಿವಿಧ ನಗರಪಾಲಿಕೆ ಕಚೇರಿ ಆವರಣಗಳಲ್ಲಿ ಗಣರಾಜ್ಯೋತ್ಸವ ಆಯಾ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ನಡೆಯಿತು.
'ಸಂವಿಧಾನಕ್ಕೆ ಅಗೌರವ ತೋರಿಸುವವರು ದೇಶದ್ರೋಹಿಗಳು’
‘ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣವೇ ಸಂವಿಧಾನ ಹಾಗೂ ಸರ್ಕಾರದ ಆಶಯ. ಸಂವಿಧಾನವೇ ನಮ್ಮ ಧರ್ಮ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಸಂವಿಧಾನ ಉಳಿಸುವ ಸಲುವಾಗಿಯೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೊ ಹೆಸರಿನಲ್ಲಿ ಹೆಜ್ಜೆ ಹಾಕಿದವರು ನಾವು. ಸಂವಿಧಾನಕ್ಕೆ ಗೌರವ ಕೊಟ್ಟವನು ನಿಜವಾದ ದೇಶಭಕ್ತ. ಸಂವಿಧಾನಕ್ಕೆ ಅಗೌರವ ತೋರಿಸುವವರು ದೇಶದ್ರೋಹಿಗಳು’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಂ. ರೇವಣ್ಣ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.