ADVERTISEMENT

ನೇಮಕಾತಿ ಆದೇಶ ಪತ್ರಕ್ಕೆ ಆಗ್ರಹ

ಪಿಯು ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 20:23 IST
Last Updated 12 ಅಕ್ಟೋಬರ್ 2020, 20:23 IST
ಪಿಯು ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಪಿಯು ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ಪಿಯು ಉಪನ್ಯಾಸಕ ಹುದ್ದೆಗಳಿಗೆ ಅಂತಿಮ ನೇಮಕಾತಿ ಆದೇಶ ಪತ್ರ ನೀಡುವಂತೆ ಒತ್ತಾಯಿಸಿ ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಪಿಯು ಉಪನ್ಯಾಸಕ ಹುದ್ದೆಗಳಿಗೆ 2015ರಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಯಿತು. 2019ರ ಮಾರ್ಚ್‍ನಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ನೇಮಕಾತಿ ಪಟ್ಟಿ ಬಿಡುಗಡೆಯಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿದ್ದಪ್ರಕರಣಗಳು ಇತ್ಯರ್ಥಗೊಂಡಿದ್ದು,ಈ ಮಾರ್ಚ್‍ನಲ್ಲಿ ಅಂತಿಮ ನೇಮಕಾತಿ ಆದೇಶ ಪತ್ರವನ್ನು ಇಲಾಖೆ ನೀಡಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಈವರೆಗೆ ನೇಮಕಾತಿ ಆದೇಶ ಪತ್ರ ಅಭ್ಯರ್ಥಿಗಳ ಕೈಸೇರಿಲ್ಲ’ ಎಂದು ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿ ಬಿ.ಸಿ.ಯೋಗೇಶ್ ಅಳಲು ತೋಡಿಕೊಂಡರು.

‘ನೇಮಕಾತಿ ಪತ್ರ ನೀಡುವಂತೆ ಕೋರ್ಟ್ ಆದೇಶಿಸಿ, ಅ.15ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಅಭ್ಯರ್ಥಿಗಳಿಗೆ ಈಗಾಗಲೇ ಸ್ಥಳ ನಿಯೋಜನೆಯೂ ಆಗಿದೆ. ಆದರೂ, ಇಲಾಖೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ಮೀನಮೇಷ ಎಣಿಸುತ್ತಿದೆ. ಒಂದು ವೇಳೆ ಈಗ ನೇಮಕಾತಿ ನಡೆದರೆ, ವೇತನ ನೀಡಬೇಕೆಂಬ ಉದ್ದೇಶದಿಂದ ಈ ಧೋರಣೆ ನಡೆಸುತ್ತಿದೆ. ಕಾಲೇಜುಗಳು ಆರಂಭವಾಗುವವರೆಗೆ ನಮ್ಮನ್ನು ಬೇರೆ ಸೇವೆಗಳಿಗೆ ನಿಯೋಜಿಸಿ, ವೇತನ ನೀಡಬಹುದು. ಇದಕ್ಕೂ ನಾವು ಸಿದ್ಧರಿದ್ದೇವೆ’ ಎಂದರು.

ADVERTISEMENT

‘ಆಯ್ಕೆಯಾಗಿರುವ 1,200 ಮಂದಿಯಲ್ಲಿ ಶೇ 90ರಷ್ಟು ಅಭ್ಯರ್ಥಿಗಳು ಗ್ರಾಮೀಣ ಭಾಗದವರು. ಇದರಲ್ಲಿ
ಬಹುತೇಕರು 40ರಿಂದ 50 ವರ್ಷದವರಿದ್ದಾರೆ. ಇವರು ಈಗ ನೇಮಕಗೊಂಡರೂ 10 ವರ್ಷಗಳು ಮಾತ್ರ ಸೇವೆ ಸಲ್ಲಿಸುವ ಅವಕಾಶ ಪಡೆಯಲಿದ್ದಾರೆ. ಹುದ್ದೆಗಾಗಿ ಇಲ್ಲಿಯವರೆಗೆ ಸಂಕಷ್ಟಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿಯ ಅಂತಿಮ ಆದೇಶ ಪತ್ರಗಳನ್ನು ಇಲಾಖೆ ನೀಡಬೇಕು’ ಎಂದು ಮತ್ತೊಬ್ಬ ಅಭ್ಯರ್ಥಿ ಒತ್ತಾಯಿಸಿದರು.

‘ಅಭ್ಯರ್ಥಿಗಳು ಮಳೆಯಲ್ಲೇ ಪಿಯು ಮಂಡಳಿ ಎದುರು ಕೂತಿದ್ದಾರೆ. ಈಗಲಾದರೂ ಕಣ್ತೆರೆಯಿರಿ. ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕ ದೂರ ಮಾಡಿ’ ಎಂದುವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.