ADVERTISEMENT

ಬೆಂಗಳೂರು: ಜಾಹೀರಾತು ನೀತಿ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 16:16 IST
Last Updated 3 ಆಗಸ್ಟ್ 2024, 16:16 IST
<div class="paragraphs"><p>ಎನ್. ಆರ್‌.ರಮೇಶ್</p></div>

ಎನ್. ಆರ್‌.ರಮೇಶ್

   

ಬೆಂಗಳೂರು: ‘ಅಧಿಕೃತ ಜಾಹೀರಾತು ಏಜೆನ್ಸಿಗಳಿಂದ ಬಾಕಿ ಇರುವ ₹646 ಕೋಟಿ ಶುಲ್ಕವನ್ನು ಬಿಬಿಎಂಪಿ ವಸೂಲಿ ಮಾಡಬೇಕು. ಹೊಸ ಜಾಹೀರಾತು ನೀತಿಯನ್ನು ಹಿಂಪಡೆಯಬೇಕು’ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್ ಆಗ್ರಹಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಪತ್ರ ಬರೆದಿರುವ ರಮೇಶ್‌, ‘ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅಳತೆಗಳ ಜಾಹೀರಾತು ಫಲಕಗಳನ್ನು ಅಳವಡಿಸುವ ಗುತ್ತಿಗೆಯನ್ನು ಪಡೆದಿರುವ ಒಟ್ಟು 110 ಅಧಿಕೃತ ಜಾಹೀರಾತು ಏಜೆನ್ಸಿಗಳು ಮತ್ತು 2,621 ಅನಧಿಕೃತ ಜಾಹೀರಾತು ಏಜೆನ್ಸಿಗಳು ಇವೆ. ಅಧಿಕೃತ ಏಜೆನ್ಸಿಗಳಿಂದಲೇ ₹331 ಕೋಟಿ ಶುಲ್ಕ ಬಾಕಿ ಇದೆ. ಪಿಪಿಪಿ ಮಾದರಿಯ ಸ್ಕೈವಾಕ್‌, ಬಸ್‌ ತಂಗುದಾಣ, ಹೈಟೆಕ್‌ ಶೌಚಾಲಯಗಳ ಮೇಲಿನ ಜಾಹೀರಾತು ಶುಲ್ಕದಿಂದ ₹314 ಕೋಟಿ ಬಾಕಿ ಇದೆ’ ಎಂದಿದ್ದಾರೆ.

ADVERTISEMENT

‘ಎಲ್ಲ ರೀತಿಯ ಜಾಹೀರಾತು ಫಲಕಗಳನ್ನು ನಿಷೇಧಿಸಬೇಕೆಂದು ಹೈಕೋರ್ಟ್‌ ಮಧ್ಯಂತರ ಆದೇಶವನ್ನೂ ನೀಡಿದೆ. ವಾಹನಗಳ ಮೇಲೆ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ ಎಂದು 2009ರ ಸೆಪ್ಟೆಂಬರ್‌ 1ರಂದು ಸರ್ಕಾರಿ ಆದೇಶವೂ ಆಗಿದೆ. ಇಷ್ಟಾದರೂ ಹೊಸ ಜಾಹೀರಾತು ನೀತಿ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ರಸ್ತೆ ಬದಿಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವುದರಿಂದ ಅಪಘಾತಗಳು ಸಂಭವಿಸುವ ಅವಕಾಶಗಳೇ ಅಧಿಕವಾಗಿರುತ್ತದೆ ಎಂಬ ಬೆಂಗಳೂರು ಸಂಚಾರ ಪೊಲೀಸರ ಅಭಿಪ್ರಾಯವನ್ನೂ ಸರ್ಕಾರ ಮತ್ತು ಬಿಬಿಎಂಪಿ ಕಡೆಗಣಿಸಿದೆ’ ಎಂದು ದೂರಿದ್ದಾರೆ.

‘ವಂಚಕ ಜಾಹೀರಾತು ಏಜೆನ್ಸಿಗಳು ಮತ್ತು ಪ್ರಭಾವಶಾಲಿ ರಾಜಕಾರಣಿಗಳು, ಅಧಿಕಾರಿಗಳಿಗೆ ಮಾತ್ರ ಹತ್ತಾರು ಕೋಟಿ ರೂಪಾಯಿ ಅಕ್ರಮ ಸಂಪಾದನೆಗೆ ದಾರಿ ಮಾಡಿಕೊಡುವ ಏಕೈಕ ದುರುದ್ದೇಶದಿಂದ ‘ಹೊಸ ಜಾಹೀರಾತು ನೀತಿ - 2024’ ಜಾರಿ ಮಾಡಲಾಗುತ್ತಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್, ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರು ಪರಿಗಣಿಸಿ, ನೀತಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.