ಭಾರತೀಯ ಪ್ರಾಣಿಶಾಸ್ತ್ರ ಸಮ್ಮೇಳನದಲ್ಲಿ 'ದಿ ಬುಕ್ ಆಫ್ ಅಬ್ಸ್ರಕ್ಟ್' ಪುಸ್ತಕ ಬಿಡುಗಡೆಗೊಳಿಸಲಾಯಿತು
ಬೆಂಗಳೂರು: ‘ಪ್ರಾಣಿಗಳಿಂದ ಅನೇಕ ಕಾಯಿಲೆ, ಆರೋಗ್ಯ ಸಮಸ್ಯೆಗಳು ವ್ಯಾಪಕವಾಗಿ ಹಬ್ಬುತ್ತವೆ. ಆ ನಿಟ್ಟಿನಲ್ಲಿ ಪ್ರಾಣಿವಿಜ್ಞಾನದ ಸುದೀರ್ಘ ಅಧ್ಯಯನ ಅವಶ್ಯಕ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ. ಪ್ರತಿಪಾದಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗ ಆಯೋಜಿಸಿದ್ದ ಭಾರತೀಯ ಪ್ರಾಣಿಶಾಸ್ತ್ರ ಸಮ್ಮೇಳನದಲ್ಲಿ ‘ಸುಸ್ಥಿರ ಅಭಿವೃದ್ಧಿಗಾಗಿ ಪ್ರಾಣಿಶಾಸ್ತ್ರದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ವಿಷಯದ ಕುರಿತು ಮಾತನಾಡಿದರು.
‘ಪ್ರಾಣಿ ಸಂಕುಲದ ಕುರಿತು ಸುದೀರ್ಘ ಅಧ್ಯಯನಕ್ಕೆ ಈ ಸಮ್ಮೇಳನ ವೇದಿಕೆಯಾಗಿದೆ. ಪ್ರಾಣಿವಿಜ್ಞಾನ ಕುರಿತು ಸಮರ್ಪಕ ಅಧ್ಯಯನ ನಡೆಸುವುದರಿಂದ ಆರೋಗ್ಯ, ಪರಿಸರದ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಪಶುಸಂಗೋಪನೆ, ಆನುವಂಶಿಕ ರೋಗಗಳು, ವನ್ಯಜೀವಿ ವಿಧಿ ವಿಜ್ಞಾನ ಮತ್ತು ಸಂರಕ್ಷಣಾ ತಳಿ ವಿಜ್ಞಾನ, ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಮಾಲಿನ್ಯ, ವನ್ಯಜೀವಿ ಕಳ್ಳಸಾಗಣೆ ಮತ್ತು ಶೋಷಣೆ, ಆರೋಗ್ಯ ಭದ್ರತೆ, ಪ್ರಾಣಿಗಳ ಜೀವವೈವಿಧ್ಯದ ಕುರಿತು ಅನೇಕ ತಜ್ಞರು ಉಪನ್ಯಾಸ ನೀಡಿದರು. ನಂತರ ಸಂವಾದದ ಮೂಲಕ ಸುದೀರ್ಘ ಚರ್ಚೆ ನಡೆಸಿದರು.
ಇದೇ ವೇಳೆ ಪ್ರಾಣಿವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಧ್ಯಯನಕ್ಕೆ ಅನುವು ಮಾಡುವ ತಂತ್ರಜ್ಞಾನಗಳ ಕುರಿತು ಚರ್ಚಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವ ವಿಜ್ಞಾನಿಗಳು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಕುಲಪತಿಗಳಾದ ಎಚ್.ಎ ರಂಗನಾಥ್, ಪ್ರೊ.ಎನ್.ಬಿ.ರಾಮಚಂದ್ರ, ಪ್ರಾಣಿಜ್ಞಾನ ವಿಭಾಗದ ಮುಖ್ಯಸ್ಥೆ ಬಿ.ಪಿ.ಹರಿಣಿ, ಪ್ರಾಧ್ಯಾಪಕ ಪಿ.ಮಹಬೂಬ್ ಬಾಷಾ, ಪ್ರೊ.ಉಷಾ ಆನಂದಿನಿ, ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು, ಪ್ರೊ.ದಿನೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.