ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹಿನ್ನಡೆ: ಡಾ.ಸಿ.ಎನ್‌. ಮಂಜುನಾಥ್‌

ಬೆಂಗಳೂರು ನಗರ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 23:30 IST
Last Updated 10 ಜುಲೈ 2023, 23:30 IST
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು    – ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಅನುದಾನದ ಕೊರತೆಯಿಂದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹಿನ್ನಡೆಯಾಗಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಎರಡನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ‘ಸಂಶೋಧನಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಮತ್ತು ಯುಜಿಸಿ ಅನುದಾನ ಬಿಡುಗಡೆಗೆ ಹಿಂದೇಟು ಹಾಕಬಾರದು. ಸಂಶೋಧನೆ ಇಲ್ಲದೆಯೇ ಪ್ರಗತಿ ಅಸಾಧ್ಯ. ಸಂಶೋಧನೆಯು ಆವಿಷ್ಕಾರದ ಜೀವನಾಡಿ. ಚೀನಾ, ಜಪಾನ್‌ ಸೇರಿದಂತೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗಳಿಗೆ ಅನುದಾನ ನೀಡುತ್ತಿರುವುದು ಕಡಿಮೆ’ ಎಂದರು.

‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ತರಬೇಕಾಗಿದೆ. ಶಿಕ್ಷಣವು ಜ್ಞಾನ ಪಡೆಯುವ ರಹದಾರಿಯಾಗಬೇಕೇ ವಿನಾ ಮಕ್ಕಳ ಮೇಲೆ ಒತ್ತಡ ಹೇರಬಾರದು. ಹೆಚ್ಚು ನಿರೀಕ್ಷಿಸಿದಷ್ಟು ಒತ್ತಡವೂ ಹೆಚ್ಚಾಗುತ್ತದೆ. ಎಲ್‌ಕೆಜಿ, ಯುಕೆಜಿ ಹಂತದಲ್ಲೇ ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ. ಬಸ್‌ಗಳಲ್ಲೂ ಮಕ್ಕಳನ್ನು ಪ್ರಾಣಿಗಳ ರೀತಿಯಲ್ಲಿ ಶಾಲೆಗೆ ಕಳುಹಿಸಲಾಗುತ್ತಿದೆ. ಇಂತಹ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಂಸ್ಕೃತಿ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಬದ್ಧತೆ ಇಲ್ಲದ ಪದವಿಗಳಿಗೆ ಯಾವುದೇ ಅರ್ಥ ಇಲ್ಲ. ಇದು ಕೊಳಚೆ ನೀರಿನಂತೆ. ಇಂದು ನಾವು 3ಜಿ, 4ಜಿ ಜಗತ್ತಿನಲ್ಲಿದ್ದೇವೆ. ಈ ‘ಜಿ’ಗಳು ಹೊಸತಲ್ಲ. ಮೊದಲ ‘ಜಿ’ ಗುರು, ಎರಡನೇ ‘ಜಿ’ ‘ದೇವರು’ ಮತ್ತು ಮೂರನೇ ‘ಜಿ’ ಗೈಡ್‌ ಹಾಗೂ ಸಹಜವಾಗಿ ನಾಲ್ಕನೇ ‘ಜಿ’ ಗೂಗಲ್‌ ಆಗಿದೆ’ ಎಂದು ವಿಶ್ಲೇಷಿಸಿದರು.

ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ಪದವಿ ಪಡೆದಿರುವವರು ನೌಕರಿಗೆ ಅಲೆದಾಡುವ ಬದಲು ಉದ್ಯಮಿಗಳಾಗುವ ಪ್ರಯತ್ನ ಮಾಡಬೇಕು. ಈ ಮೂಲಕ ಹಲವರಿಗೆ ಉದ್ಯೋಗ ಒದಗಿಸುವ ಅವಕಾಶ ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.

‘ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಚಿನ್ನದ ಪದಕ ಪಡೆದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಘಟಿಕೋತ್ಸವದಲ್ಲಿ ರ‍್ಯಾಂಕ್‌ ಪಡೆದ 61 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಪದವಿ ಪಡೆಯುತ್ತಿರುವವರಲ್ಲಿ ಶೇ 60ರಷ್ಟು ಮಹಿಳೆಯರು, ಶೇ 40ರಷ್ಟು ಪುರುಷರು ಇದ್ದರು.

ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಕುಲಸಚಿವ ಸಿ.ಎನ್‌.ಶ್ರೀಧರ್ ಇದ್ದರು.

ಘಟಿಕೋತ್ಸವದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ನಿಸಾರ್ ಅಹಮದ್‌ ಶೇಷಾದ್ರಿಪುರ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೆ ಪಿ. ಕೃಷ್ಣ ಮತ್ತು ತಾರಿಣಿ ಚಿದಾನಂದ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಡೀನ್‌ ಪ್ರೊ. ಹರಿಪ್ರಸಾದ್‌ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಡಾ.ಸಿ.ಎನ್‌. ಮಂಜುನಾಥ್‌ ಪ್ರೊ. ವಿ. ಲೋಕೇಶ್‌ ಇದ್ದರು.
ಪೋಷಕರು ಪ್ರಾಂಶುಪಾಲರು ಸ್ನೇಹಿತರು ಬೆಂಬಲದಿಂದ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು. ಕೇವಲ ಪರೀಕ್ಷೆ ದೃಷ್ಟಿಯಿಂದ ಮಾತ್ರ ಅಧ್ಯಯನ ಮಾಡಲಿಲ್ಲ. ವಿಷಯ ಅರಿತುಕೊಂಡು ಓದುವುದು ಮುಖ್ಯ. ಈಗ ಎಂಬಿಎ ಮಾಡುತ್ತಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದೇನೆ.
–ಎಂ. ಅಜಿತ್‌ ಕುಮಾರ್‌ (ಬಿ.ಕಾಂ. ಪದವಿಯಲ್ಲಿ ಮೂರು ಚಿನ್ನದ ಪದಕ) ಕೃಪಾನಿಧಿ ಕಾಲೇಜ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌
ಪದವಿಯ ಮೊದಲ ವರ್ಷದಿಂದಲೇ ಯೋಜನೆ ರೂಪಿಸಿ ಅಧ್ಯಯನ ಮಾಡುತ್ತಿದ್ದೆ. ಜತೆಗೆ ಕಾಲೇಜಿನಲ್ಲೂ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹವಿದೆ. ಪೋಷಕರು ಶಿಕ್ಷಕರ ಮಾರ್ಗದರ್ಶನ ಮತ್ತು ಬೆಂಬಲದಿಂದ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು. ಸದ್ಯ ಅಮೆಜಾನ್‌ ಕಂಪನಿಗೆ ಸೇರಿದ್ದೇನೆ. ಒಂದೆರಡು ವರ್ಷ ಕೆಲಸ ಮಾಡಿದ ಬಳಿಕ ಎಂಬಿಎ ಅಧ್ಯಯನ ಮಾಡುತ್ತೇನೆ
– ಎಸ್‌. ದೀಪ್ತಿ. (ಬಿಬಿಎನಲ್ಲಿ ಮೂರು ಚಿನ್ನದ ಪದಕ) ಶೇಷಾದ್ರಿಪುರ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು
‘ಇಷ್ಟಪಟ್ಟು ಓದಿದ್ದೆ’ ‘ರಸಾಯನ ವಿಜ್ಞಾನವನ್ನು ಇಷ್ಟಪಟ್ಟು ಓದಿದ್ದರಿಂದ ಚಿನ್ನದ ಪದಕ ಬರಬಹುದೆಂಬ ನಿರೀಕ್ಷೆ ಮಾಡಿದ್ದೆ. ಮೂರು ಚಿನ್ನ ಬಂದಿರುವುದಕ್ಕೆ ಖುಷಿಯಾಗಿದೆ. ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯುವ ಇಚ್ಛೆ ಹೊಂದಿದ್ದೇನೆ. ಪೋಷಕರು ಮತ್ತು ಪ್ರಾಧ್ಯಾಪಕರ ಪ್ರೋತ್ಸಾಹದಿಂದಲೇ ಪದಕ ಪಡೆಯಲು ಸಾಧ್ಯವಾಗಿದೆ.
- ಪದ್ಮಾವತಿ ವಿ.ಕೆ. ನಾಯರ್ (ಎಂ.ಎಸ್ಸಿ ರಸಾಯನ ವಿಜ್ಞಾನದಲ್ಲಿ ಮೂರು ಚಿನ್ನದ ಪದಕ) ಸೆಂಟ್ರಲ್ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.