ಬೆಂಗಳೂರು: ಸಮಾಜದಲ್ಲಿ ಅಸ್ಪೃಶ್ಯತೆ ಇರುವವರೆಗೆ ಮೀಸಲಾತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದುವರಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಹಾಗೂ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶೋಷಿತ ಸಮುದಾಯಗಳು ಬೇಡುವ ಸ್ಥಿತಿಯಿಂದ ನೀಡುವ ಸ್ಥಿತಿಗೆ ಬರಬೇಕು ಎಂದು ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಂದರು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಎಲ್ಲರೂ ವಿದ್ಯಾವಂತರಾಗಬೇಕು. ನಮಗಿಂತ ಸಂಕಷ್ಟದಲ್ಲಿರುವ, ಬಡತನದಲ್ಲಿರುವ ಜನರನ್ನು ಕೈಹಿಡಿದು ಮೇಲೆತ್ತಬೇಕು’ ಎಂದು ಹೇಳಿದರು.
ಸಂವಿಧಾನದ ಕರಡು ರಚಿಸುವ ಸಮಯದಲ್ಲಿ ಅಂಬೇಡ್ಕರ್ ಸಂಕಷ್ಟದಲ್ಲಿದ್ದರು. ಆರೋಗ್ಯ ಕೈಕೊಟ್ಟಿತ್ತು. ಉಳಿದವರು ಅಸಹಕಾರ ತೋರುತ್ತಿದ್ದರು. ಆದರೂ, ಸಮಾನತೆ ಸಾರುವ ಸಂವಿಧಾನ ರಚಿಸದೇ ಹೋದರೆ ಶೋಷಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ನ್ಯಾಯ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪಟ್ಟು ಹಿಡಿದು ಸಂವಿಧಾನ ರಚಿಸಿದರು ಎಂದು ವಿವರಿಸಿದರು.
ಮಹಾಬೋಧಿ ಸೊಸೈಟಿಯ ಬಿಕ್ಕುಗಳಾದ ಸುಜಾತೋ ಮತ್ತು ರಖ್ಖಿತ ಅವರು ತ್ರಿಚರಣ ಮತ್ತು ಪಂಚಶೀಲದಮ್ಮಪದ ಸಂದೇಶ ನೀಡಿದರು. ರಾಜ್ಯ ಹಣಕಾಸು ಸಂಸ್ಥೆಯ ಬಿ. ಕೃಷ್ಣಯ್ಯ ಸಂವಿಧಾನ ಪೀಠಿಕೆ ಪಠಣ ಮಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.