ಬೆಂಗಳೂರು: ‘ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವಾಸಿ ವೈದ್ಯರ ಶಿಷ್ಯವೇತನ ಹೆಚ್ಚಳ ಮಾಡಬೇಕು’ ಎಂದು ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್‌ಡಿ) ಸರ್ಕಾರಕ್ಕೆ ಆಗ್ರಹಿಸಿದೆ.
‘ಶಿಷ್ಯವೇತನ ಹೆಚ್ಚಳ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಮೌನವಹಿಸಿದೆ. ಇದರಿಂದ ನಿವಾಸಿ ವೈದ್ಯರು ಆರ್ಥಿಕ ಮತ್ತು ವೃತ್ತಿಪರ ಒತ್ತಡಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮ ರೋಗಿಗಳ ಆರೈಕೆಯ ಮೇಲೆಯೂ ಬೀಳಲಿದೆ. ವಿರಾಮವಿಲ್ಲದೆ ಕೆಲಸ ಮಾಡುತ್ತಿರುವ ನಿವಾಸಿ ವೈದ್ಯರು ಅರ್ಹತೆಗಿಂತ ಕಡಿಮೆ ಶಿಷ್ಯವೇತನ ಪಡೆಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮವಹಿಸಬೇಕು’ ಎಂದು ಕೆಎಆರ್‌ಡಿ ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ತಿಳಿಸಿದ್ದಾರೆ.
‘ಇತರೆ ರಾಜ್ಯಗಳಲ್ಲಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ವೇತನ ಹೆಚ್ಚಳ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಹೋರಾಟ ಮಾಡದೆ ವೇತನ ಹೆಚ್ಚಳ ಆಗಿರುವ ಉದಾಹರಣೆಯೇ ಇಲ್ಲ. ಏರುತ್ತಿರುವ ಹಣದುಬ್ಬರದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಶಿಷ್ಯ ವೇತನ ಹೆಚ್ಚಳಕ್ಕೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿವಾಸಿ ವೈದ್ಯರು ಪ್ರತಿಭಟನೆ ಕೈಗೊಳ್ಳಲಿದ್ದು, ತುರ್ತು ಅಲ್ಲದ ಎಲ್ಲ ಸೇವೆಗಳನ್ನು ಅನಿರ್ದಿಷ್ಟಕಾಲ ಸ್ಥಗಿತಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.