ADVERTISEMENT

‘ಸಿಎ’ ನಿವೇಶನದ ಭೂಮಿಯಲ್ಲಿ ವಸತಿ ನಿವೇಶನ: ಅಕ್ರಮವಾಗಿ ನಿರ್ಮಿಸಿರುವುದು ಬೆಳಕಿಗೆ

ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆಯಲ್ಲಿ 12 ಪ್ರಕರಣ

ನವೀನ್‌ ಮಿನೇಜಸ್‌
Published 5 ಜನವರಿ 2023, 22:06 IST
Last Updated 5 ಜನವರಿ 2023, 22:06 IST
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 12ಕ್ಕೂ ಹೆಚ್ಚು ನಾಗರಿಕ ಸೌಲಭ್ಯದ (ಸಿಎ) ನಿವೇಶನಗಳ ಪ್ರದೇಶವನ್ನು ನಿವೇಶನಗಳನ್ನಾಗಿ ಅಕ್ರಮವಾಗಿ ನಿರ್ಮಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ನಿವೇಶನ ಹಂಚಿಕೆ ಸಮಯದಲ್ಲಿ ಉದ್ಯಾನ, ಮೈದಾನ ಸೇರಿ ಸಿಎ ಸೌಲಭ್ಯದ ನಿವೇಶನಗಳನ್ನು ಗುರುತಿಸಲಾಗಿತ್ತು. ಆದರೆ, ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೆ ಸಿಎ ನಿವೇಶನಗಳನ್ನು ಪರಿವರ್ತಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಶೇ 35ರಷ್ಟು ಸಿಎ ನಿವೇಶನಗಳನ್ನು ಪರಿವರ್ತಿಸಲಾಗಿರುವುದು ಕಂಡುಬಂದಿದೆ. ಇದಲ್ಲದೆ, ವಾಣಿಜ್ಯ ಹಾಗೂ ದೊಡ್ಡ ವಸತಿ ಸಂಕೀರ್ಣಗಳಿಗೆ ಮೀಸಲಾದ ಪ್ರದೇಶವನ್ನು ಸಾಮಾನ್ಯ ನಿವೇಶನಗಳನ್ನಾಗಿ ಪರಿವರ್ತಿಸಿರುವುದು ಬಿಡಿಎಗೆ ದೊಡ್ಡ ನಷ್ಟವಾಗಿದೆ. ಇಂತಹ ನಿವೇಶನಗಳು ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಸಂಪರ್ಕಿಸುವ 100 ಅಡಿ ರಸ್ತೆಗೆ ಹೊಂದಿಕೊಂಡಂತಿವೆ.

ADVERTISEMENT

‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ನಗರ ಯೋಜನೆ ಇಲಾಖೆಯ ಮೂರು ಮಂದಿಯ ಸಮಿತಿಯನ್ನು ತನಿಖೆಗೆ ನೇಮಿಸಲಾಗಿದೆ. ಸಿಎ ನಿವೇಶನಗಳಲ್ಲಿ ಸಾಮಾನ್ಯ ನಿವೇಶನಗಳನ್ನು ನಿರ್ಮಿಸಿರುವುದನ್ನು ನಾವು ಗಮನಿಸಿದ್ದೇವೆ. ಇದು ಅಕ್ರಮ’ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಹೇಳಿದರು.

ಬಿಡಿಎ ಆಯುಕ್ತ ಕುಮಾರ್‌ ನಾಯಕ್‌ ಅವರನ್ನು ಈ ಅಕ್ರಮದ ಬಗ್ಗೆ ಸಂಪರ್ಕಿಸಿದಾಗ ಅವರು ಅಚ್ಚರಿ
ವ್ಯಕ್ತಪಡಿಸಿದರು.

‘ಎಂಟು ವರ್ಷದಿಂದ ಬಡಾವಣೆ 2,252 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. 26,500ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದ್ದು, ಎಂಟು ವರ್ಷದಿಂದ ಇದು ಪೂರ್ಣಗೊಂಡಿಲ್ಲ. ಈಗಾಗಲೇ ನಿವೇಶನ ಪಡೆದಿರುವವರಿಗೆ ಇಂತಹ ಅಕ್ರಮ ಪರಿವರ್ತನೆಯಿಂದ ಹಸಿರು ಹಾಗೂ ಆಟದ ಮೈದಾನ ಲಭ್ಯವಾಗುವುದಿಲ್ಲ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ವೇದಿಕೆಯ ಸೂರ್ಯ ಕಿರಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.