ADVERTISEMENT

ವ್ಯವಸ್ಥಾಪಕ ಹುದ್ದೆ ತೊರೆದು ಸರಗಳವು

ಪೀಣ್ಯ ಪೊಲೀಸರ ಕಾರ್ಯಾಚರಣೆ * ₹3.70 ಲಕ್ಷ ಮೌಲ್ಯದ ಆಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 19:45 IST
Last Updated 5 ಅಕ್ಟೋಬರ್ 2020, 19:45 IST
ಜಯಕುಮಾರ್
ಜಯಕುಮಾರ್   

ಬೆಂಗಳೂರು: ಕಂಪನಿಯೊಂದರ ವ್ಯವಸ್ಥಾಪಕ ಹುದ್ದೆಗೆ ರಾಜೀನಾಮೆ ನೀಡಿ ಸರಗಳವು ಮಾಡಲಾರಂಭಿಸಿದ್ದ ಆರೋಪಿ ಜಯಕುಮಾರ್ ಅಲಿಯಾಸ್ ಜಯ ಗಣಿ (42) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಜಯಕುಮಾರ್ ಅಲಿಯಾಸ್ ಜಯ ಗಣಿ (39), ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ. ಬನಶಂಕರಿಯಲ್ಲಿ ನೆಲೆಸಿದ್ದ. ಆತನಿಂದ ₹ 3.70 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ, 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಡಿಪ್ಲೊಮಾ ಪೂರ್ಣಗೊಳಿಸಿದ್ದ ಜಯಕುಮಾರ್, 2012ರಲ್ಲಿ ನಗರದ ಕಂಪನಿಯೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರಿದ್ದ. ಕೈ ತುಂಬ ಹಣ ಬರುತ್ತಿದ್ದಂತೆ ಪಬ್ ಹಾಗೂ ಬಾರ್‌ಗಳಿಗೆ ಹೋಗಿ ಪಾರ್ಟಿ ಮಾಡಲಾರಂಭಿಸಿದ್ದ. ಖರ್ಚಿಗೆ ಹಣದ ಸಮಸ್ಯೆಯಾಗುತ್ತಿದ್ದಂತೆ ವ್ಯವಸ್ಥಾಪಕ ಹುದ್ದೆಗೆ ರಾಜೀನಾಮೆ ಕೊಟ್ಟು, ಸಹಚರರಾದ ಕಾರ್ತಿಕ್ ಮತ್ತು ಅರುಣ್ ಜೊತೆ ಸೇರಿ ಸರಗಳವು ಮಾಡಲಾರಂಭಿಸಿದ್ದ. ಕದ್ದ ಆಭರಣ ಮಾರಿ ಹಣ ಸಂಪಾದಿಸುತ್ತಿದ್ದ’ ಎಂದೂ ತಿಳಿಸಿದರು.

ADVERTISEMENT

‘ಆಗಸ್ಟ್ 8ರಂದು ರಾತ್ರಿ ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ಸಿದ್ದಗಂಗಮ್ಮ ಎಂಬುವರ ಸರವನ್ನು ಆರೋಪಿ ಕಿತ್ತೊಯ್ದಿದ್ದ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತ್ತು’ ಎಂದು ಹೇಳಿದರು.

‘2019ರಲ್ಲಿ ಸರಗಳವು ಪ್ರಕರಣದಲ್ಲಿ ಜಯಕುಮಾರ್ ಜೈಲಿಗೆ ಹೋಗಿದ್ದ. ಜಾಮೀನು ಮೇಲೆ ಹೊರಬಂದಿದ್ದ ಆತ, ನ್ಯಾಯಾಲಯದ ವಿಚಾರಣೆಗೂ ಹಾಜರಾಗಿರಲಿಲ್ಲ. ಆಗಾಗ ನಗರಕ್ಕೆ ಬರುತ್ತಿದ್ದ ಆತ, ನಗರದ ವಸತಿಗೃಹದಲ್ಲಿ ಉಳಿದುಕೊಳ್ಳುತ್ತಿದ್ದ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಸರಗಳವು ಮಾಡಿಕೊಂಡು ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

’ಪೊಲೀಸರ ಕೈಗೆ ಸಿಗಬಾರದೆಂದು 15 ದಿನಕ್ಕೊಮ್ಮೆ ವಸತಿಗೃಹ ಬದಲಿಸುತ್ತಿದ್ದ ಆರೋಪಿ, 20 ಸಿಮ್‌ಕಾರ್ಡ್‌ಗಳನ್ನು ಇಟ್ಟುಕೊಂಡಿದ್ದ. ನಗರದಲ್ಲಿ 22 ಹಾಗೂ ತಮಿಳುನಾಡಿನಲ್ಲಿ 12 ಕಡೆ ಆತ ಸರಗಳವು ಮಾಡಿದ್ದಾನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.