ADVERTISEMENT

ಬುಡಕಟ್ಟು ನಿವಾಸಿಗಳನ್ನು ಆದಿವಾಸಿಗಳೆಂದು ಘೋಷಿಸಿ: ಸಂಘಟನೆಗಳ ಆಗ್ರಹ

ಬುಡಕಟ್ಟು, ಅರಣ್ಯಾಧಾರಿತ ಮೂಲ ಆದಿವಾಸಿ ಬುಡಕಟ್ಟು ಮುಖಂಡರ ಸಭೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 15:37 IST
Last Updated 9 ಫೆಬ್ರುವರಿ 2025, 15:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಇರುವ ಜೇನು ಕುರುಬ, ಕೊರಗ, ಇರುಳಿಗ, ಸೋಲಿಗ ಸೇರಿದಂತೆ ನೈಜ ಬುಡಕಟ್ಟು ನಿವಾಸಿಗಳನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಪಟ್ಟಿಯಿಂದ ಕೈಬಿಟ್ಟು, ‘ಆದಿವಾಸಿಗಳು’ ಎಂದು  ಘೋಷಿಸುವಂತೆ ಈ ಸಮುದಾಯಗಳ ಸಂಘಟನೆಗಳ ಪ್ರಮುಖರ ಸಭೆ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದೆ. 

ನಗರದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ರಾಜ್ಯದ 12 ಅರಣ್ಯ ಆಧಾರಿತ ಮೂಲ ಆದಿವಾಸಿ ಬುಡಕಟ್ಟುಗಳ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಆರ್‌.ವಿ. ಚಂದ್ರಶೇಖರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.

ADVERTISEMENT

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ವ್ಯಾಪ್ತಿಯಿಂದಲೂ ಮೂಲ ಆದಿವಾಸಿಗಳನ್ನು ಕೈಬಿಟ್ಟು, ಹಿಂದೆ ಇದ್ದ ಆದಿವಾಸಿ ಅಭಿವೃದ್ಧಿ ಮಂಡಳಿಯನ್ನು ಪುನರ್ ರಚಿಸಬೇಕು. ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ನಿಗಮದ ಸ್ಥಾಪನೆ ಘೋಷಿಸಬೇಕು ಮತ್ತು ಆದಿವಾಸಿಗಳಿಗೆ ಮೂಲಸೌಕರ್ಯ ಒದಗಿಸುವ ಕುರಿತು ನಿರ್ಣಯ ಕೈಗೊಳ್ಳಬೇಕು’ ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

‘ಈಗ ಇರುವ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರವನ್ನು ಕರ್ನಾಟಕ ಆದಿವಾಸಿಗಳ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಾಗಿ ಘೋಷಿಸಿ, ಬಜೆಟ್‌ನಲ್ಲಿ ₹5 ಕೋಟಿ ಅನುದಾನ ನೀಡಬೇಕು. ನಿಗಮ ಹಾಗೂ ಅಧ್ಯಯನ ಮತ್ತು ತರಬೇತಿ ಸಂಸ್ಥೆಗೆ ಮೂಲ ಆದಿವಾಸಿ ಸಮುದಾಯಗಳ ಉನ್ನತ ಶಿಕ್ಷಣ ಪಡೆದವರನ್ನು, ಅನುಭವಿ ಅಧಿಕಾರಿಗಳನ್ನು ಅಧ್ಯಕ್ಷರಾಗಿ ನೇಮಿಸಬೇಕು. ಮೂಲ ಆದಿವಾಸಿಗಳಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಆಗ್ರಹಿಸಲಾಗಿದೆ.

ಆದಿವಾಸಿ ಬುಡಕಟ್ಟು ಮಕ್ಕಳಿಗಾಗಿ ನಿರ್ಮಿಸಿರುವ ಆಶ್ರಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ರಕ್ಷಣೆಯ ಕೊರತೆಯಿದ್ದು, ಈ ಸಂಬಂಧ ಶಾಲೆಗಳಲ್ಲಿರುವ ಮೂಲಸೌಲಭ್ಯಗಳನ್ನು ಕುರಿತು ಅಧ್ಯಯನ ಮಾಡಲು ಸಮಿತಿ ರಚಿಸಬೇಕು ಎಂದು ಸಭೆ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.