
ಫಾಲಿ ಎಚ್. ಮೇಜರ್ ಅವರಿಗೆ ʼರೇವಾ ಜೀವಮಾನ ಸಾಧನೆʼ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿರುಪಮಾ ಮೆನನ್ ರಾವ್, ಜಯಸುಧಾ, ಡಾ.ಪಿ.ಶ್ಯಾಮರಾಜು, ಡಾ.ಸಂಜಯ್ ಆರ್.ಚಿಟ್ನಿಸ್, ಉಮೇಶ್ ಎಸ್.ರಾಜು, ಡಾ.ಎಂ.ಧನಂಜಯ ಉಪಸ್ಥಿತರಿದ್ದರು
ಯಲಹಂಕ: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಭಾರತೀಯ ವಾಯುಪಡೆಯ ಮಾಜಿ ಏರ್ ಚೀಫ್ ಮಾರ್ಷಲ್ ಫಾಲಿ ಎಚ್.ಮೇಜರ್, ಭಾರತೀಯ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಹಾಗೂ ನಟಿ ಜಯಸುಧಾ ಅವರಿಗೆ ‘ರೇವಾ ಜೀವಮಾನ ಸಾಧನೆʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫಾಲಿ ಎಚ್. ಮೇಜರ್ ಮಾತನಾಡಿ, ‘ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ವಿದ್ಯಮಾನಗಳಿಂದ ಭಾರತ ತನ್ನದೇ ಆದ ವಿಶಿಷ್ಠ ಸ್ಥಾನವನ್ನು ಕಾಯ್ದುಕೊಳ್ಳಬೇಕು. ಅದಕ್ಕೆ ನಮ್ಮ ಮುಂದಿನ ಆಶೋತ್ತರಗಳು, ಜ್ಞಾನ ಆಧಾರಿತ ಆರ್ಥಿಕತೆ, ತಾಂತ್ರಿಕ ಹಾಗೂ ಸೇನಾ ಬಲಿಷ್ಠಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.
‘ಈ ಆಶೋತ್ತರಗಳು ನಿಜವಾಗಬೇಕಾದರೆ ಶಿಕ್ಷಣಸಂಸ್ಥೆಗಳು ವಿದ್ಯಾರ್ಥಿಗಳನ್ನು ಹೊಸ ಆವಿಷ್ಕಾರಗಳಲ್ಲಿ ತೊಡಗಿಸುವಂತೆ ಪ್ರೇರೇಪಿಸಬೇಕು. ವೈಜ್ಞಾನಿಕ ರಂಗದಲ್ಲಿ ಹೆಚ್ಚಿನ ಸಾಧನೆ ಮಾಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ನಾಗಾಲೋಟದಿಂದ ಮುನ್ನಗ್ಗಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಈ ಶಿಕ್ಷಣ ಸಂಸ್ಥೆಯಲ್ಲಿ ಶ್ಯಾಮರಾಜು ಅವರ ದೂರದೃಷ್ಟಿ, ಧ್ಯೇಯಗಳು ಹಾಗೂ ಉದ್ದೇಶಗಳು ಪೂರಕವಾಗಿವೆ’ ಎಂದರು.
ನಿರುಪಮಾ ಮೆನನ್ ರಾವ್ ಮಾತನಾಡಿ, ‘ಭಾರತೀಯ ಪುರಾತನ ನಳಂದ ಮತ್ತು ತಕ್ಞಶಿಲಾ ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಜೀವನದ ತತ್ವ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನೆರವಾಗಿದ್ದವು. ಈ ದಿಸೆಯಲ್ಲಿ ಇಂದಿನ ಆಧುನಿಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಸಾಮರ್ಥ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಬೇಕು’ ಎಂದು ತಿಳಿಸಿದರು
ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ರೇವಾ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನಮಾಡಿ ಹೊರನಡೆದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜಗತ್ತಿನ ಪ್ರಸ್ತುತ ಸವಾಲುಗಳನ್ನು ಎದುರಿಸುವಂತೆ ಅವರನ್ನು ಸಿದ್ಧಪಡಿಸುವುದು ನಮ್ಮ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಅವರು ಕೇವಲ ಉದ್ಯೋಗಿಗಳಾಗದೆ ಉದ್ಯೋಗಧಾತರಾಗಬೇಕೆಂಬುದನ್ನು ಸದಾ ಬಯಸುತ್ತೇನೆ’ ಎಂದು ಹೇಳಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ಅಭಿವೃದ್ಧಿಪಡಿಸಲಾದ ಎಐ ಆಧಾರಿತ ಮಾನವಾಕೃತಿ ಬುದ್ಧಿವಂತ ಸಹಾಯಕ ʼಆರ್‌ಐಎʼ ಅನಾವರಣಗೊಳಿಸಲಾಯಿತು. ಕುಲಪತಿ ಡಾ. ಸಂಜಯ್ ಆರ್.ಚಿಟ್ನಿಸ್, ಸಹ ಕುಲಪತಿ ಉಮೇಶ್ ಎಸ್.ರಾಜು, ಕುಲಸಚಿವ ಡಾ.ಎಂ.ಧನಂಜಯ ಉಪಸ್ಥಿತರಿದ್ದರು.