ADVERTISEMENT

ಮೀಸಲಾತಿ ಪಟ್ಟಿ ಪರಿಷ್ಕರಿಸಿ: ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 21:37 IST
Last Updated 17 ಜನವರಿ 2023, 21:37 IST
ವೆಂಕಟರಾಮಯ್ಯ
ವೆಂಕಟರಾಮಯ್ಯ   

ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ವೀಕರಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಪರಿಷ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಒಕ್ಕೂಟವು ಪತ್ರ ಬರೆದಿದೆ.

ಕಳೆದ 20 ವರ್ಷಗಳಿಂದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಪರಿಷ್ಕರಣೆಯಾಗಿಲ್ಲ. ಹಲವು ಬಾರಿ ಹಿಂದುಳಿದ ವರ್ಗಗಳ ಆಯೋಗ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ ಮೀಸಲಾತಿ ಕಲ್ಪಿಸುವ ಬಗ್ಗೆ ಸ್ಪಷ್ಟವಾದ ಶಿಫಾರಸ್ಸುಗಳನ್ನು ಮಾಡಿದೆ. ಆದರೆ, ರಾಜಕೀಯ ತೀರ್ಮಾನಗಳಿಂದಾಗಿ ಬಲಾಢ್ಯರು ಮೀಸಲಾತಿ ಪಡೆದು ಶೋಷಿತರ ಪಾಲನ್ನು ಕಬಳಿಸುತ್ತಿದ್ದಾರೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್‌. ವೆಂಕಟರಾಮಯ್ಯ ಅವರು ತಿಳಿಸಿದ್ದಾರೆ.

ADVERTISEMENT

ಸಾಮಾಜಿಕ ನ್ಯಾಯ ಸೂತ್ರದ ಅಡಿಯಲ್ಲಿ ಮತ್ತು ಅಸಮತೋಲನ ಉಂಟಾಗುವ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಈಗಾಗಲೇ ಸಿದ್ಧವಾಗಿರುವ ಎಚ್‌. ಕಾಂತರಾಜು ಅಧ್ಯಕ್ಷತೆಯ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ತಕ್ಷಣವೇ ಅಂಗೀಕರಿಸಿ ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂತರಾಜು ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಹಾಕಿಲ್ಲ ಎನ್ನುವ ನೆಪವನ್ನು ಸರ್ಕಾರ ಹೇಳುತ್ತಿದೆ. ಸಮಗ್ರವಾಗಿ ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಿರುವುದರಿಂದ ಯಾವ ಸಮುದಾಯವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿದೆ ಎನ್ನುವ ಚಿತ್ರಣ ಸ್ಪಷ್ಟವಾಗುತ್ತದೆ. ಇದರಿಂದ, ಮುಂದುವರಿದ ಸಮುದಾಯಗಳನ್ನು ಇತರ ವರ್ಗಗಳಿಗೆ ಸೇರಿಸುವ ಮೂಲಕ ಅತಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.