ADVERTISEMENT

ಬೆಂಗಳೂರು | ‘ಈಗಲ್‌ ನೆಸ್ಟ್‌ ಲೇಕ್‌’ ಪುನಶ್ಚೇತನ

515 ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿರುವ ಕೆರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:38 IST
Last Updated 14 ಆಗಸ್ಟ್ 2024, 15:38 IST
515 ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿ ಪುನಶ್ಚೇತನಗೊಂಡಿರುವ ‘ಈಗಲ್‌ ನೆಸ್ಟ್‌ ಲೇಕ್‌’
515 ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿ ಪುನಶ್ಚೇತನಗೊಂಡಿರುವ ‘ಈಗಲ್‌ ನೆಸ್ಟ್‌ ಲೇಕ್‌’   

ಬೆಂಗಳೂರು: ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತ ಸಮೀಪದ 515 ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿರುವ ‘ಈಗಲ್‌ ನೆಸ್ಟ್‌ ಲೇಕ್‌’ನ ಎಲ್ಲ ಕಲ್ಮಶಗಳನ್ನು ನಿವಾರಿಸಿ, ಸ್ವಚ್ಛ ನೀರಿನ ಸಂಗ್ರಹ ತಾಣವನ್ನಾಗಿಸಲಾಗಿದೆ.

ಎಂಟು ಎಕರೆ ವಿಸ್ತೀರ್ಣದ ‘ಈಗಲ್ಸ್‌ ನೆಸ್ಟ್‌ ಲೇಕ್‌’ ಹಲವು ವರ್ಷಗಳಿಂದ ಕಲುಷಿತಗೊಂಡಿತ್ತು. ಗಿಡಗಳು ಬೆಳೆದು ಪೊದೆಗಳು ಬೆಳೆದಿದ್ದವು. ಭಾರತೀಯ ಸೇನೆ, 3ಒನ್4 ಕ್ಯಾಪಿಟಲ್ ಮತ್ತು ದಟ್ಸ್‌ ಇಕೊ ಫೌಂಡೇಷನ್‌ ವತಿಯಿಂದ ‘ಹ್ಯಾಂಡ್ಸ್‌ ಆನ್‌ ಸಿಎಸ್‌ಆರ್’ ಉಪಕ್ರಮದಡಿ ಈ ಕೆರೆಯ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿತ್ತು.

ಮಾಲಿನ್ಯ, ಪರಿಸರಕ್ಕೆ ಹಾನಿ ಉಂಟು ಮಾಡುವ ಜಲಚರಗಳು ಮತ್ತು ಕಡಿಮೆಯಾದ ನೀರಿನ ಸಾಮರ್ಥ್ಯದಿಂದ ‘ಈಗಲ್ಸ್‌ ನೆಸ್ಟ್‌ ಲೇಕ್‌’ ಹಾಳಾಗಿತ್ತು. 2024ರ ಮಾರ್ಚ್ 25ರಂದು ಆರಂಭವಾದ ಜಂಟಿ ಸಹಭಾಗಿತ್ವದ ಕಾಮಗಾರಿಯಿಂದ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.

ADVERTISEMENT

ಕೆರೆಯ ಪುನಶ್ಚೇತನ ಕಾಮಗಾರಿ ಮುಗಿದ ಸಂದರ್ಭದಲ್ಲಿ ಅದನ್ನು ಅನಾವರಣಗೊಳಿಸಿದ ಲೆಫ್ಟಿನೆಂಟ್ ಜನರಲ್ ಕರಣ್‌ಬೀರ್‌ ಸಿಂಗ್ ಬ್ರಾರ್ ಮಾತನಾಡಿ,  ‘ಕೆರೆ ಪುನಶ್ಚೇತನದಿಂದ ಪರಿಸರ ಆಸ್ತಿಯನ್ನು ಮರುಸ್ಥಾಪಿಸಿದಂತಾಗಿದೆ. ನಮ್ಮ ಕುಟುಂಬದ ಸದಸ್ಯರಿಗಾಗಿ ಪ್ರಶಾಂತ ಮನರಂಜನಾ ಸ್ಥಳವೊಂದು ಈಗ ಹೊಸದಾಗಿ ಸೃಷ್ಟಿಯಾಗಿದೆ’ ಎಂದರು.

‘ಜನರಲ್ ಬ್ರಾರ್ ಸಿಂಗ್ ನೇತೃತ್ವದಲ್ಲಿ ನಡೆದ ಪುನಶ್ಚೇತನ ಕಾರ್ಯದಲ್ಲಿ ಭಾರತೀಯ ಸೇನೆ, 3ಒನ್‌4 ಕ್ಯಾಪಿಟಲ್‌ನ ಸಿದ್ಧಾರ್ಥ ಪೈ ಮತ್ತು ಗುರುನಂದನ್ ರಾವ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು’ ಎಂದು ಮಾಹಿತಿ ನೀಡಿದರು.

3ಒನ್‌4 ಕ್ಯಾಪಿಟಲ್‌ನ ಸಂಸ್ಥಾಪಕ ಪಾಲುದಾರರಾದ ಸಿದ್ಧಾರ್ಥ ಪೈ ಮಾತನಾಡಿ, ‘ಈ ಪುನಶ್ಚೇತನ ಕೆಲಸದಲ್ಲಿ ನೀರಿನ ಗುಣಮಟ್ಟ ಸುಧಾರಣೆಯಾಗಿದೆ ಮತ್ತು ಜೀವವೈವಿಧ್ಯ ಹೆಚ್ಚಾಗಿದೆ. ಮಹತ್ವದ ಪಾರಿಸರಿಕ ಸವಾಲುಗಳ ಎದುರಿಸುವಲ್ಲಿನ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಕಾರ್ಯಕ್ರಮಗಳಿಗೆ ಈ ಯೋಜನೆ ಉತ್ತಮ ನಿದರ್ಶನವಾಗಿದೆʼ ಎಂದು ಹೇಳಿದರು.

ದಟ್ಸ್ ಇಕೊ ಫೌಂಡೇಷನ್‌ನ ಹ್ಯಾಂಡ್ಸ್‌ ಆನ್‌ ಸಿಎಸ್‌ಆರ್‌ನ ಟ್ರಸ್ಟಿಗಳಾದ ಗುರುನಂದನ್ ರಾವ್ ಮತ್ತು ಹರ್ಷ ತೇಜ್, ಮೇಜರ್ ಜನರಲ್ ವಿಟಿ ಮ್ಯಾಥ್ಯೂಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.