ADVERTISEMENT

ಭದ್ರತಾ ಸಿಬ್ಬಂದಿಗೆ ಕೊನೆಗೂ ಸಂಬಳ

ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡುವ ಆರ್‌ಜಿಐಸಿಡಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:37 IST
Last Updated 14 ಮಾರ್ಚ್ 2020, 22:37 IST
ಡಾ.ಕೆ.ಸುಧಾಕರ್‌
ಡಾ.ಕೆ.ಸುಧಾಕರ್‌   

ಬೆಂಗಳೂರು: ಕೊರೊನಾ ಸೋಂಕು ಶಂಕಿತರು ಪ್ರಮುಖವಾಗಿ ತೆರಳುವ ನಗರದ ರಾಜೀವ್ ಗಾಂಧಿ ಹೃದಯ ಕಾಯಿಲೆ ಸಂಸ್ಥೆಯ (ಆರ್‌ಜಿಐಸಿಡಿ) ಭದ್ರತಾ ಸಿಬ್ಬಂದಿ ಮೂರು ತಿಂಗಳಿಂದ ಸಂಬಳದಿಂದ ವಂಚಿತರಾಗಿದ್ದು,ತಕ್ಷಣ ವೇತನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

‘ಭದ್ರತಾ ಸೇವೆ ನೀಡುವ ಏಜೆನ್ಸಿಗೆ ಸಿಬ್ಬಂದಿಯ ಸಂಬಳದ ಮೊತ್ತವನ್ನು ಸಂಸ್ಥೆ ಈಗಾಗಲೇ ನೀಡಿದೆ, ಆದರೆ, ಈ ಏಜೆನ್ಸಿಯವರು ಭವಿಷ್ಯ ನಿಧಿಯಂತಹ ಅಗತ್ಯದ ಮಾಹಿತಿ ನೀಡದೆ ಸತಾಯಿಸುತ್ತಿದ್ದರು. ಸಿಬ್ಬಂದಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅವರಿಗೆ ತಕ್ಷಣ ವೇತನ ನೀಡಲಾಗುವುದು, ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಂಕಿತಕೊರೊನಾ ಸೋಂಕಿಗೆ ಒಳಗಾದವರನ್ನು ಮೊದಲು ಭೇಟಿಯಾಗುವುದೇ ಈ ಭದ್ರತಾ ಸಿಬ್ಬಂದಿ. ಸೋಂಕು ಹರಡದಂತೆ ಶಂಕಿತರ ಮೇಲೆ ಔಷಧ ಸಿಂಪಡಿಸುವ ಕೆಲಸವನ್ನೂ ಇವರು ನಿರ್ವಹಿಸುತ್ತಾರೆ. ಇಲ್ಲಿ ಇಂತಹ 30 ಸಿಬ್ಬಂದಿ ಇದ್ದು, ಅವರ ವೇತನ ಕೇವಲ ₹ 10,500. ಆದರೆ, ಡಿಸೆಂಬರ್‌ನಿಂದೀಚೆಗೆ ಇವರಿಗೆ ವೇತನ ನೀಡಿರಲಿಲ್ಲ.

ADVERTISEMENT

‘ನಾನು ಈ ಸಂಸ್ಥೆಗೆ ಹೋಗುತ್ತಲೇ ಇದ್ದೇನೆ. ಶುಕ್ರವಾರ ಸಹ ಅಲ್ಲಿಗೆ ಹೋಗಿದ್ದೆ, ಆದರೆ, ನನ್ನ ಗಮನಕ್ಕೆ ಯಾರೂ ಈ ವಿಷಯ ತಂದಿರಲಿಲ್ಲ. ಇದೀಗ ಮನವರಿಕೆಯಾಗಿದ್ದು, ತಕ್ಷಣ ಸಂಬಳ ನೀಡುವಂತೆ ಸೂಚನೆ ನೀಡಲಿದ್ದೇನೆ. ಕೊರೊನಾ ನಿಯಂತ್ರಣದಲ್ಲಿ ಈ ಸಿಬ್ಬಂದಿಯ ಪಾತ್ರವೂ ದೊಡ್ಡದಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪ್ರತಿಕ್ರಿಯಿಸಿದರು.

*
ಇದುವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ, ಭದ್ರತಾ ಸಿಬ್ಬಂದಿಗೆ ತಕ್ಷಣ ಸಂಬಳ ಕೊಡಿಸಲು ತಿಳಿಸುತ್ತೇನೆ.
–ಡಾ.ಕೆ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.