ADVERTISEMENT

ಪ್ರತಿಭಟನೆಗಳಿಂದ ಪೊಲೀಸರ ಆರೋಗ್ಯಕ್ಕೆ ಅಪಾಯ

ಹಲಸೂರು ಗೇಟ್‌ ಠಾಣೆ: 36 ಪ್ರತಿಭಟನೆ l 17 ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌

ಪ್ರವೀಣ ಕುಮಾರ್ ಪಿ.ವಿ.
Published 1 ಅಕ್ಟೋಬರ್ 2020, 20:24 IST
Last Updated 1 ಅಕ್ಟೋಬರ್ 2020, 20:24 IST
ಮೆಜೆಸ್ಟಿಕ್‌ ಬಳಿ ಮಾಸ್ಕ್‌ ಧರಿಸದ ವ್ಯಕ್ತಿಯೊಬ್ಬರಿಗೆ ಬಿಬಿಎಂಪಿ ಮಾರ್ಷಲ್‌ ದಂಡ ವಿಧಿಸಿದರು ---– ಪ್ರಜಾವಾಣಿ ಚಿತ್ರ
ಮೆಜೆಸ್ಟಿಕ್‌ ಬಳಿ ಮಾಸ್ಕ್‌ ಧರಿಸದ ವ್ಯಕ್ತಿಯೊಬ್ಬರಿಗೆ ಬಿಬಿಎಂಪಿ ಮಾರ್ಷಲ್‌ ದಂಡ ವಿಧಿಸಿದರು ---– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಪೊಲೀಸ್‌ ಸಿಬ್ಬಂದಿಯನ್ನು ಅಪಾಯಕ್ಕೆ ತಳ್ಳುತ್ತಿವೆ. ಪ್ರತಿಭಟನೆಗಳ ಬಂದೋಬಸ್ತ್‌ ಒದಗಿಸುವ ಪೊಲೀಸರು ಅತ್ತ ಹಿರಿಯ ಅಧಿಕಾರಿಗಳ ಆದೇಶ ಧಿಕ್ಕರಿಸಲೂ ಆಗದೇ ಇತ್ತ ಕೋವಿಡ್‌ನಿಂದ ರಕ್ಷಿಸಿಕೊಳ್ಳಲಿಕ್ಕೂ ಆಗದೇ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಪುರಭವನ, ಮೈಸೂರು ಬ್ಯಾಂಕ್‌ ವೃತ್ತ, ಬಿಬಿಎಂಪಿ ಕೇಂದ್ರ ಕಚೇರಿಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಹಲಸೂರು ಗೇಟ್‌ ಠಾಣೆಯವ ಸರಹದ್ದಿನಲ್ಲಿ ನಗರದಲ್ಲಿ ಅತಿ ಹೆಚ್ಚು ಪ್ರತಿಭಟನೆಗಳು ನಡೆಯುತ್ತವೆ. ಈ ಠಾಣೆಯ ವ್ಯಾಪ್ತಿಯೊಂದರಲ್ಲೇ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿ 36 ಪ್ರತಿಭಟನೆಗಳು ನಡೆದಿವೆ. ಈ ಠಾಣೆಯ 17 ಸಿಬ್ಬಂದಿಗೆ ಕೋವಿಡ್‌ ತಗುಲಿರುವುದು ಪೊಲೀಸರು ಎಷ್ಟರ ಮಟ್ಟಿಗೆ ಅಪಾಯ ಎದುರಿಸುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತಿದೆ.

‘ಮೇಲಧಿಕಾರಿಗಳು ಆದೇಶ ನೀಡಿದಾಗ ನಾವು ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲೇ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂತರ ಕಾಪಾಡಲು ಸಾಧ್ಯವಿಲ್ಲ. ಪ್ರತಿಭಟನಕಾರರಿಗೆ ಕೋವಿಡ್‌ ಇದ್ದರೆ ನಮಗೂ ಹಬ್ಬುವುದು ಖಚಿತ’ ಎಂದು ಠಾಣೆಯ ಸಿಬ್ಬಂದಿಯೊಬ್ಬರು ತಮ್ಮ ಇಕ್ಕಟ್ಟಿನ ಪರಿಸ್ಥಿತಿಯನ್ನು ವಿವರಿಸಿದರು.

ADVERTISEMENT

‘ಪ್ರತಿಭಟನಕಾರರನ್ನು ವಶಕ್ಕೆ ಪಡೆಯುವಾಗ ಅವರಿಂದ ನಮಗೆ ಕೋವಿಡ್‌ ಹರಡಬಹುದು ಎಂಬ ಅಳುಕುಒಳಗೊಳಗೆ ಇದ್ದೇ ಇರುತ್ತದೆ. ನಮಗೆ ನೀಡಿರುವ ಮಾಸ್ಕ್‌, ಮುಖ ಕವಚಗಳು ನಮ್ಮನ್ನು ಕೋವಿಡ್‌ನಿಂದ ರಕ್ಷಿಸಲಾರವು ಎಂಬ ಸತ್ಯ ನಮಗೂ ತಿಳಿದಿದೆ. ನಮ್ಮ ಹೆಂಡತಿ ಮಕ್ಕಳ ಹಾಗೂ ವಯಸ್ಸಾದ ತಂದೆಮ ತಾಯಿಯ ಚಿತ್ರಣ ಕಣ್ಣಮುಂದೆ ಬರುತ್ತದೆ. ಅವೆಲ್ಲವನ್ನೂ ನುಂಗಿಕೊಂಡು ನಾವು ಕರ್ತವ್ಯ ನಿರ್ವಹಿಸಬೇಕು’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ನಾವು ಕೇವಲ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಸಾಲದು. ಸ್ವಾತಂತ್ರ್ಯ ಉದ್ಯಾನ, ಮೌರ್ಯ ವೃತ್ತಗಳಲ್ಲಿ ಪ್ರತಿಭಟನೆ ನಡೆದಾಗಲೂ ಬಂದೋಬಸ್ತ್‌ಗೆ ನಮ್ಮನ್ನು ನಿಯೋಜಿಸಲಾಗುತ್ತದೆ. ತಿಂಗಳ ಹಿಂದೆ ವಿಲ್ಸನ್‌ ಗಾರ್ಡನ್‌ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ಎಎಸ್‌ಐ ಐದೇ ದಿನಗಳ ಅಂತರದಲ್ಲಿ ತೀರಿಕೊಂಡರು. ನಮ್ಮ ಠಾಣೆಯಲ್ಲಿ 17 ಮಂದಿಗೆ ಕೋವಿಡ್‌ ಬಂದಿದೆ. ನಗರದಲ್ಲಿ 17 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದುವರೆಗೆ 3,500ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ ತಗುಲಿದೆ’ ಎಂದು ಪರಿಸ್ಥಿತಿ ವಿವರಿಸಿದರು.

ಪೊಲೀಸ್‌ ಸಿಬ್ಬಂದಿಯ ಕೋವಿಡ್‌ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಕಾಯ್ದಿರಿಸಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಇಲಾಖೆಯನ್ನು ಕೋರಿದ್ದರು. ಆದರೆ, ಆ ಬೇಡಿಕೆ ಈಡೇರಿಲ್ಲ. ಕೋವಿಡ್‌ನಿಂದ ಗಂಭಿರ ಸಮಸ್ಯೆ ಎದುರಿಸಿದ ಅನೇಕ ಸಿಬ್ಬಂದಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದೂ ಸಾಧ್ಯವಾಗಿಲ್ಲ. ಕೆಲವರು ಪ್ರಾಣವನ್ನೂ
ಕಳೆದುಕೊಂಡಿದ್ದಾರೆ.

ಪ್ರತಿಭಟನೆ ವೇಳೆ ಅನೇಕರು ಮಾಸ್ಕ್‌ ಧರಿಸಿರುವುದಿಲ್ಲ. ಅಂತರ ಕಾಪಾಡುವುದಿಲ್ಲ. ಇವೆಲ್ಲವೂ ಕೋವಿಡ್‌ ಹರಡುವ ಅಪಾಯವನ್ನು ಹೆಚ್ಚಿಸುತ್ತಿವೆ. ಪ್ರತಿಭಟನೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಿಯಂತ್ರಿಸುವುದು ಆಯೋಜಕರಿಗೆ ಹಾಗೂ ಪೊಲೀಸರಿಗೆ ತಲೆನೋವಿನ ವಿಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.