ADVERTISEMENT

ದ್ವೇಷದ ಮಾತು ಹಿಂಸಾತ್ಮಕವಾದರೆ ಅಪಾಯ- ಸಹಾಯಕ ಪ್ರಾಧ್ಯಾಪಕ ಎ. ನಾರಾಯಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:46 IST
Last Updated 29 ಜನವರಿ 2022, 19:46 IST
ಎ.ನಾರಾಯಣ
ಎ.ನಾರಾಯಣ   

ಬೆಂಗಳೂರು: ‘ಅಸಹನೆಯ, ದ್ವೇಷದ ಮಾತುಗಳು ಬಹಿರಂಗವಾಗಿ ಹಿಂಸೆ, ಕೊಲೆಗೆ ಕರೆ ನೀಡುವ ಹಂತಕ್ಕೆ ಬಂದಿದ್ದು, ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿಯ ಕರೆ ಕೊಡುವುದು ಬಹಳ ಗಂಭೀರ ವಿಷಯ’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎ. ನಾರಾಯಣ ಆತಂಕ ವ್ಯಕ್ತಪಡಿಸಿದರು.

ಗೌರಿ ಲಂಕೇಶ್‌ ಅವರ 60ನೇ ಜನ್ಮದಿನ ಅಂಗವಾಗಿ ಗೌರಿ ಸ್ಮಾರಕ ಟ್ರಸ್ಟ್‌ ಮತ್ತು ಸಿಟಿಜನ್‌ ಫಾರ್‌ ಜಸ್ಟೀಸ್‌ ಆ್ಯಂಡ್‌ ಪೀಸ್‌ ಸಂಸ್ಥೆ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ‘ಹೇಟ್‌ ಆ್ಯಸ್‌ ಸ್ಟೇಟ್‌ ಯೋಜನೆ’ ವಿಷಯದ ಆನ್‌ಲೈನ್‌ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಇಂಥ ಗಂಭೀರ ಸ್ಥಿತಿಗೆ ತಲುಪಿರುವ ಹಂತದಲ್ಲಿ ಸಮಷ್ಠಿ ಪ್ರಜ್ಞೆ ಜಾಗೃತಗೊಂಡು ಪ್ರತಿರೋಧ ವ್ಯಕ್ತಪಡಿಸಬಹುದು. ಅದು ಸಂಭವಿಸದೇ ಇದ್ದರೆ, ದ್ವೇಷದ ಮಾತುಗಳು ಇನ್ನಷ್ಟು ಹಿಂಸಾತ್ಮಕ ಹಂತಕ್ಕೆ ಹೋಗಬಹುದು. ಆಗ ಅದು ಬಹಳ ಕೆಟ್ಟ ಸ್ವರೂಪ ಪಡೆದುಕೊಳ್ಳಬಹುದು’ ಎಂದೂ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಹೇಟ್‌ ಪದವನ್ನು ದ್ವೇಷ ಎಂದು ಭಾಷಾಂತರಿಸಬಹುದು. ಆದರೆ, ಆ ಪದದ ತೀವ್ರತೆ ಇವತ್ತಿನ ವಿದ್ಯಮಾನಗಳನ್ನು ಹಿಡಿದಿಡುವುದಿಲ್ಲ. ಸದ್ಯ ತೀರಾ ಗಂಭೀರವಾದ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ. ಈ ಕರಾಳ ಪ್ರವೃತ್ತಿ ಮಾತಿನ ರೂಪದಲ್ಲಿ ನಮ್ಮ ಮುಂದಿದೆ. ಸ್ಟೇಟ್‌ ಪದಕ್ಕೆ ರಾಜ್ಯ ಎಂದು ಅರ್ಥೈಸಿಕೊಳ್ಳುವುದಕ್ಕಿಂತಲೂ, ಇಡೀ ವ್ಯವಸ್ಥೆ ಎಂದು ಕಲ್ಪಿಸಿಕೊಳ್ಳುವುದು ಸೂಕ್ತ’ ಎಂದರು.

‘ಅಂದರೆ, ಸರ್ಕಾರದ ಯೋಜನೆಯಾಗಿ ದ್ವೇಷ, ಇಡೀ ವ್ಯವಸ್ಥೆಯ ಭಾಗವಾಗಿ ದ್ವೇಷ ಬದಲಾಗಿದೆ. ಅದಕ್ಕಿಂತಲೂ ಈಗ ರಾಜಕೀಯದ ಯೋಜನೆಯಾಗಿ, ಭಾವನೆಯಾಗಿ ದ್ವೇಷ ಎಂಬ ಸ್ಥಿತಿ ಇದೆ. ಈ ದೇಶದ ರಾಜಕಾರಣ, ದ್ವೇಷದ ರಾಜಕಾರಣ ಆಗಿ ಬದಲಾಗಿದೆ. ಇದಕ್ಕೆ ಸಮಷ್ಠಿ ಮೌನವೇ ಕಾರಣ. ರಾಜಕೀಯ ದ್ವೇಷವನ್ನು ಬಂಡವಾಳವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಕೂಡಾ ದ್ವೇಷವನ್ನು ಒಂದು ಯೋಜನೆಯಾಗಿ ಮುಂದುವರಿಸುವ ಅನಿವಾರ್ಯತೆಗೆ ಸಿಲುಕುತ್ತದೆ’ ಎಂದೂ ಅಭಿಪ್ರಾಯಪಟ್ಟರು.

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌, ದ್ವೇಷದ ರಾಜಕೀಯದಿಂದ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯಲ್ಲಿನ ಪರಿಣಾಮದ ಬಗ್ಗೆ ಮಾತನಾಡಿದರು.

‘ಗೌರಿ ಲಂಕೇಶ್‌ ಅವರು ದ್ವೇಷಕ್ಕೆ ಗುರಿಯಾದರು. ಈಗ ಎಲ್ಲರೂ ಜಾಗೃತರಾಗಬೇಕಿದೆ. ಮೌನ ಮುರಿಯಬೇಕಿದೆ. ಇಡೀ ವ್ಯವಸ್ಥೆಯನ್ನು ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕಿದೆ. ಕೇವಲ ಮುಸ್ಲಿಂ ಎಂದಲ್ಲ, ಇಡೀ ವ್ಯವಸ್ಥೆಯ ಸಬಲೀಕರಣದ ಅಗತ್ಯವಿದೆ’ ಎಂದರು.

ಗೌರಿ ಸ್ಮಾರಕ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಗಣೇಶ್‌ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಸಬಾ ನಖ್ವಿ, ಆರ್‌ಜೆ ಸಯೆಮಾ, ಇಸ್ಮತ್‌ ಅರಾ, ಅರ್ಫಾ ಖಾನುಂ ಮತ್ತು ಕಾನೂನು ವಿದ್ಯಾರ್ಥಿ ನೂರ್‌ ಮಹ್ವಿಶ್‌ ಚರ್ಚೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.