ADVERTISEMENT

ನಿವೃತ್ತ ಶಿಕ್ಷಕನ ಕತ್ತು ಕೊಯ್ದು ಕೊಲೆ ಯತ್ನ

ಬಾಡಿಗೆ ವಿಚಾರಕ್ಕೆ ಕೃತ್ಯವೆಂಬ ಶಂಕೆ; ಆರೋಪಿ ಬೆನ್ನಟ್ಟಿ ಹಿಡಿದ ಸ್ಥಳೀಯರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:13 IST
Last Updated 20 ಸೆಪ್ಟೆಂಬರ್ 2020, 15:13 IST

ಬೆಂಗಳೂರು: ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಹುಲಿಯಪ್ಪ (77) ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಲಾಗಿದ್ದು, ಕೃತ್ಯದ ಬಳಿಕ ಪರಾರಿಯಾಗುತ್ತಿದ್ದ ಆರೋಪಿ ರಾಜೇಶ್ ಎಂಬಾತನನ್ನು ಸ್ಥಳೀಯರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಹುಲಿಯಪ್ಪ ಅವರು ಕಣ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜೇಶ್‌ನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ನಿವೃತ್ತ ಶಿಕ್ಷಕರಾದ ಹುಲಿಯಪ್ಪ, ಸುಬೇದಾರ್ ಮಸೀದಿ ಬಳಿ ವಾಸವಿದ್ದಾರೆ. ಅವರಿಗೆ ಮಾಲೀಕತ್ವದಲ್ಲಿ ಮನೆಗಳಿದ್ದು, ಅವುಗಳನ್ನು ಬಾಡಿಗೆ ನೀಡಿದ್ದರು. ಅದರಲ್ಲಿ ಒಂದು ಮನೆ ಇತ್ತೀಚೆಗೆ ಖಾಲಿ ಆಗಿತ್ತು. ’ಮನೆ ಬಾಡಿಗೆಗೆ ಇದೆ’ ಎಂದು ಫಲಕ ಹಾಕಿದ್ದರು. ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ಆರೋಪಿಗಳು, ಚಾಕುವಿನಿಂದ ಕತ್ತು ಕೊಯ್ದು ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದರು.’

ADVERTISEMENT

‘ಗಾಯಗೊಂಡ ಹುಲಿಯಪ್ಪ ಚೀರಾಡಿದ್ದರು. ಸ್ಥಳೀಯರು ಸಹಾಯಕ್ಕೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಸ್ಥಳೀಯರು ಬೆನ್ನಟ್ಟಿದ್ದರು. ಅದರಲ್ಲಿ ಒಬ್ಬಾತ ಸಿಕ್ಕಿಬಿದ್ದ. ಇನ್ನೊಬ್ಬ ಆರೋಪಿ ಸುಹೇಲ್ ಪರಾರಿಯಾದ’ ಎಂದೂ ಹೇಳಿದರು.

ಬಾಡಿಗೆ ಜಾಗ ವಿಚಾರಕ್ಕೆ ಕೃತ್ಯ ಶಂಕೆ; ‘ಆರ್‌.ಎಂ.ಸಿ ಯಾರ್ಡ್‌ ಬಳಿ ಹುಲಿಯಪ್ಪ ಅವರಿಗೆ ಸೇರಿದ್ದ ಖಾಲಿ ಜಾಗ ಇದೆ. ಅದನ್ನು ಆರೋಪಿ ಸುಹೇಲ್‌ನ ತಂದೆ ವಜೀರ್‌ಗೆ ಗುಜರಿ ವ್ಯಾಪಾರ ಮಾಡಲು ಬಾಡಿಗೆಗೆ ನೀಡಿದ್ದರು. ವಜೀರ್‌ ಬಳಿ ಆರೋಪಿ ರಾಜೇಶ್ ಕೆಲಸ ಮಾಡುತ್ತಿದ್ದ’ ಎಂದು ಧರ್ಮೇಂದ್ರಕುಮಾರ್ ಹೇಳಿದರು.

‘ಅವಧಿ ಮುಗಿದಿದ್ದರಿಂದ ಜಾಗವನ್ನು ಖಾಲಿ ಮಾಡುವಂತೆ ಹುಲಿಯಪ್ಪ, ವಜೀರ್‌ಗೆ ತಿಳಿಸಿದ್ದ. ಅಷ್ಟಕ್ಕೆ ಸಿಟ್ಟಾದ ಆರೋಪಿಗಳು, ಸಂಚು ರೂಪಿಸಿ ಕೃತ್ಯ ಎಸಗಿರುವ ಅನುಮಾನವಿದೆ. ಕೃತ್ಯದ ಸ್ವರೂಪ ನೋಡಿದಾಗ ಬೇರೆ ಕಾರಣವಿರುವ ಶಂಕೆ ಇದ್ದು, ಎಲ್ಲ ಆಯಾಮದಲ್ಲಿ ತನಿಖೆ ನಡೆದಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.