ADVERTISEMENT

ಜಕ್ಕೂರು ಮೇಲ್ಸೇತುವೆಯಲ್ಲಿ ಅಪಘಾತ: ರಸ್ತೆಯಲ್ಲೇ ಬಿದ್ದು ನರಳಿದ ಚಾಲಕ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 20:25 IST
Last Updated 22 ನವೆಂಬರ್ 2021, 20:25 IST
ರಸ್ತೆ ಅಪಘಾತ
ರಸ್ತೆ ಅಪಘಾತ   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಕ್ಕೂರು ಮೇಲ್ಸೇತುವೆಯಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಆಟೊ ಚಾಲಕ ನಾರಾಯಣ ತೀವ್ರ ಗಾಯಗೊಂಡರು. ರಸ್ತೆಯಲ್ಲೇ ಬಿದ್ದು ನರಳುತ್ತಿದ್ದ ಅವರನ್ನು ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದರು.

‘ಟೆಂಪೊ, ಆಟೊ ಹಾಗೂ ಕೆಟ್ಟು ನಿಂತಿದ್ದ ಬಿಬಿಎಂಪಿ ಕಸದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಆಟೊ ಚಾಲಕ ನಾರಾಯಣ ಅವರನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಹೇಳಿಕೆ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಬಿಬಿಎಂಪಿ ಕಸದ ಲಾರಿ ಮೇಲ್ಸೇತುವೆಯಲ್ಲಿ ಕೆಟ್ಟು ಹೋಗಿತ್ತು. ಅದನ್ನು ಚಾಲಕ ರಸ್ತೆಯ ಪಕ್ಕದಲ್ಲಿ ನಿಲುಗಡೆ ಮಾಡಿದ್ದರು. ಅದೇ ವೇಳೆ ನಾರಾಯಣ ಅವರು ಆಟೊ ಚಲಾಯಿಸಿಕೊಂಡು ನಗರದಿಂದ ವಿಮಾನ ನಿಲ್ದಾಣದತ್ತ ಮೇಲ್ಸೇತುವೆಯಲ್ಲಿ ಸಾಗುತ್ತಿದ್ದರು.’

ADVERTISEMENT

‘ಮೇಲ್ಸೇತುವೆಯಲ್ಲಿ ಅತೀ ವೇಗದಲ್ಲಿ ಧಾವಿಸಿ ಬಂದ ಟೆಂಪೂ, ಆಟೊಗೆ ಗುದ್ದಿ ಹೊರಟು ಹೋಗಿತ್ತು. ನಿಯಂತ್ರಣ ತಪ್ಪಿದ್ದರಿಂದ ಚಾಲಕ ನಾರಾಯಣ, ಆಟೊವನ್ನು ಕಸದ ಲಾರಿಗೆ ಗುದ್ದಿಸಿದ್ದರು. ಇದರಿಂದ ಆಟೊ ಸಂಪೂರ್ಣ ಜಖಂಗೊಂಡು, ನಾರಾಯಣ ರಸ್ತೆಯಲ್ಲೇ ಬಿದ್ದು ಹೊರಳಾಡಿದರು’ ಎಂದೂ ತಿಳಿಸಿದರು.

‘ತಲೆ, ಮುಖ, ಕೈ –ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ‘ಕಾಪಾಡಿ... ಕಾಪಾಡಿ...’ ಎನ್ನುತ್ತಿದ್ದ ಚಾಲಕ, ಕೆಲ ನಿಮಿಷ ಕಾಲ ರಸ್ತೆಯಲ್ಲೇ ನರಳುತ್ತಿದ್ದರು. ಅದೇ ಮಾರ್ಗದಲ್ಲಿ ಹೊರಟಿದ್ದ ಕೆಲ ಸಾರ್ವಜನಿಕರು, ಅವರ ಸಹಾಯಕ್ಕೆ ಹೋಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ’ ಎಂದೂ ಪೊಲೀಸರು ವಿವರಿಸಿದರು.

‘ಟೆಂಪೊ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆತನಿಗಾಗಿ ಹುಡುಕುತ್ತಿದ್ದೇವೆ’ ಎಂದೂ ಹೇಳಿದರು.

ಅಪಘಾತದಿಂದಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.