ADVERTISEMENT

ಸಾವಿನಲ್ಲೂ ಮಾನವೀಯತೆ ಮೆರೆದ ಯುವಕ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 21:30 IST
Last Updated 14 ನವೆಂಬರ್ 2020, 21:30 IST
ಶಿವರಾಜು
ಶಿವರಾಜು   

ಯಲಹಂಕ: ರಸ್ತೆ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕರೊಬ್ಬರು, ತಾವಿನ್ನು ಬದುಕುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆಯೇ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.

ದೇವನಹಳ್ಳಿ ತಾಲ್ಲೂಕು, ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಮದ ಶಿವರಾಜು (26) ಮಾನವೀಯತೆ ಮೆರೆದ ಯುವಕ.

ಇತ್ತೀಚೆಗೆ ವಿಜಯಪುರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶಿವರಾಜು ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಅಧಿಕ ರಕ್ತಸ್ರಾವವಾಗಿತ್ತು. ಕೊಡಿಗೇಹಳ್ಳಿ ಸಮೀಪದ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನ ಚಿಕಿತ್ಸೆ ನೀಡಿದ್ದು ಸ್ಪಂದಿಸಲಿಲ್ಲ. ಶಿವರಾಜು ಬದುಕುಳಿಯುವುದು ಅಸಾಧ್ಯ ಎಂದು ಪೋಷಕರಿಗೆ ತಿಳಿಸಿದರು.

ADVERTISEMENT

ಪೋಷಕರಾದ ಮುನಿರಾಜು ಮತ್ತು ಮುನಿಲಕ್ಷ್ಮಿ ದಂಪತಿ, ಮಗನ ಅನುಮತಿಯ ಮೇರೆಗೆ ಅವರ ಹೃದಯ, ಮೂತ್ರಪಿಂಡ ಮತ್ತಿತರ ಅಂಗಾಂಗಗಳನ್ನು ದಾನಮಾಡಲು ಒಪ್ಪಿದರು.

‘ಜೀವವಿರುವವರೆಗೂ ಸತತ ಪರಿಶ್ರಮದ ಮೂಲಕ ಮನೆಯನ್ನು ಬೆಳಗಿದ ಮಗ, ಸಾವಿನಲ್ಲಿಯೂ ಇತರರ ಬಾಳಿಗೆ ಆಸರೆಯಾಗುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಂಡ ಎಂಬ ಹೆಮ್ಮೆ ಇದೆ’ ಎಂದು ಮುನಿರಾಜು ಕಂಬನಿ ಮಿಡಿದರು.

‘ಶಿವರಾಜು ನೀಡಿರುವ ಅಂಗಾಂಗದಿಂದ ಎಂಟು ಜನರಿಗೆ ಸಹಾಯವಾಗಲಿದೆ’ ಎಂದು ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.