ADVERTISEMENT

ರಸ್ತೆಯಲ್ಲೇ ಜಲ್ಲಿ–ಕಲ್ಲು; ಮನೆ ಮಾಲೀಕರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 20:00 IST
Last Updated 12 ಜನವರಿ 2020, 20:00 IST

ಬೆಂಗಳೂರು: ಮನೆ ನಿರ್ಮಾಣಕ್ಕಾಗಿ ತಂದಿದ್ದ ಜಲ್ಲಿ– ಕಲ್ಲು ಹಾಗೂ ಮರಳನ್ನು ರಸ್ತೆ ಮೇಲೆಯೇ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದ ಆರೋಪದಡಿ ಇಬ್ಬರು ಮನೆ ಮಾಲೀಕರ ವಿರುದ್ಧ ಜೆ.ಸಿ.ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ರಸ್ತೆಯಲ್ಲಿ ಜಲ್ಲಿ–ಕಲ್ಲು ಹಾಗೂ ಮರಳು ಇರುವುದನ್ನು ಗಮನಿಸಿದ್ದರು. ಸಿಬ್ಬಂದಿ ನೀಡಿದ್ದ ದೂರು ಆಧರಿಸಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿದ (ಐಪಿಸಿ 283) ಆರೋಪದಡಿ ಸ್ಥಳೀಯ ನಿವಾಸಿಗಳಾದ ಸೈಯದ್ ಯೂನಸ್ (36) ಹಾಗೂ ತುಳಸಿರಾಣಿ ಎಂಬುವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೆ.ಸಿ.ನಗರದ ಮಾರಪ್ಪ ಗಾರ್ಡನ್‌ನ ಚರ್ಚ್‌ ರಸ್ತೆಯಲ್ಲಿ ಸೈಯದ್ ಯೂನಸ್ (36) ಮನೆ ನಿರ್ಮಾಣ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಜಲ್ಲಿ–ಕಲ್ಲು ಮತ್ತು ಮರಳು ಹಾಕಿದ್ದಾರೆ. ಅದರ ಸಮೀಪದಲ್ಲೇ ತುಳಸಿರಾಣಿ ಸಹ ಮನೆ ನಿರ್ಮಾಣ ಮಾಡುತ್ತಿದ್ದು, ಅದರ ಮುಂದಿನ ರಸ್ತೆಯಲ್ಲೇ ಜಲ್ಲಿ–ಕಲ್ಲು ಹಾಗೂ ಮರಳು ಹಾಕಿದ್ದಾರೆ’ ಎಂದು ಅವರು ತಿಳಿಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.