ADVERTISEMENT

ಬೆಂಗಳೂರು | ರಸ್ತೆಗಳ ಕಸ ಗುಡಿಸಲು ₹613 ಕೋಟಿ: ಎಚ್‌.ಕೆ.ಪಾಟೀಲ

7 ವರ್ಷ ಬಾಡಿಗೆ ಯಂತ್ರಗಳ ಮೂಲಕ ಸ್ವಚ್ಛತೆಗೆ ಸಚಿವ ಸಂಪುಟ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 16:13 IST
Last Updated 13 ನವೆಂಬರ್ 2025, 16:13 IST
<div class="paragraphs"><p>ಎಚ್‌.ಕೆ.ಪಾಟೀಲ</p></div>

ಎಚ್‌.ಕೆ.ಪಾಟೀಲ

   

ಬೆಂಗಳೂರು: ನಗರದಲ್ಲಿ ಸಾರ್ವಜನಿಕರ ಆರೋಗ್ಯ, ರಸ್ತೆ ಸ್ವಚ್ಛತೆ, ವಾಯು ಗುಣಮಟ್ಟದ ಸುಧಾರಣೆಗೆ ಯಂತ್ರಗಳ ಮೂಲಕ ಕಸ ಗುಡಿಸುವುದಕ್ಕೆ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಪಡೆದುಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಸಮ್ಮತಿಸಿದೆ.

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ADVERTISEMENT

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಕಸ ಗುಡಿಸಲು ಪ್ರತ್ಯೇಕವಾಗಿ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಏಳು ವರ್ಷದವರೆಗೆ ಪಡೆದುಕೊಳ್ಳಬಹುದು. ಇದಕ್ಕೆ ಆಯಾ ನಗರ ಪಾಲಿಕೆಗಳೇ ವೆಚ್ಚ ಭರಿಸಬೇಕಾಗಿದ್ದು, ಒಟ್ಟು ₹613.25 ಕೋಟಿ ಮೊತ್ತಕ್ಕೆ (ಜಿಎಸ್‌ಟಿ ಒಳಗೊಂಡು) ಅನುಮೋದನೆ ನೀಡಲಾಗಿದೆ ಎಂದರು.

ಹವಾಮಾನದಲ್ಲಿನ ಗಣನೀಯ ಬದಲಾವಣೆಗಳು ಮತ್ತು ನಗರದ ಅಗತ್ಯಗಳನ್ನು ಆಧರಿಸಿ ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಐದು ಪ್ಯಾಕೇಜ್‌ಗಳಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಟೆಂಡರ್‌ ಆಹ್ವಾನಿಸಬೇಕು ಎಂಬುದಾಗಿ ಸೂಚಿಸಿದೆ ಎಂದು ಹೇಳಿದರು.

ನಗರ ಪಾಲಿಕೆಗಳು ವ್ಯಾಪ್ತಿಯ ರಸ್ತೆಗಳ ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಗರ ಪ್ರದೇಶದ ಗಾಳಿಯ ಗುಣಮಟ್ಟ ಸೂಚ್ಯಂಕವನ್ನು ಮಿತಿಯಲ್ಲಿರಿಸಿಕೊಳ್ಳುವ ಜವಾಬ್ದಾರಿ ಹೊಂದಿರುತ್ತವೆ. ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದಡಿ ಬೆಂಗಳೂರಿನ ಗಾಳಿಯ ಗುಣಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿದೆ. ಯಂತ್ರಗಳ ಮೂಲಕ ರಸ್ತೆ ಗುಡಿಸುವ ಯೋಜನೆಯಿಂದ ಸಾರ್ವಜನಿಕ ಸಂಚಾರ ಸುಧಾರಣೆಯಾಗಿ, ನಾಗರಿಕರ ಆರೋಗ್ಯ, ಪರಿಸರ, ರಸ್ತೆ ಸ್ವಚ್ಛತೆ, ವಾಯುಗುಣಮಟ್ಟ ಸುಧಾರಣೆಗೆ ಪರಿಹಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಜಿಬಿಎ ಕಾಯ್ದೆ ತಿದ್ದುಪಡಿ: ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಜಿಬಿಎ ಸದಸ್ಯರನ್ನಾಗಿ ಸೇರಿಸಲು ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ಕ್ಕೆ ತಿದ್ದುಪಡಿ ತರಬೇಕು. ಈ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಪಾಟೀಲ ತಿಳಿಸಿದರು.

ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರನ್ನು ಜಿಬಿಎಗೆ ಸದಸ್ಯರನ್ನಾಗಿಸುವ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನೂ ಈ ತಿದ್ದುಪಡಿ ಒಳಗೊಳ್ಳಲಿದೆ. ಜಿಬಿಎ ಕಾರ್ಯಕಾರಿ ಸಮಿತಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನೂ ಸೇರಿಸಲಾಗುವುದು  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.