ADVERTISEMENT

ರಸ್ತೆ ಸಮಸ್ಯೆ: ಯಲಹಂಕದ ಅಟ್ಟೂರು ವಾರ್ಡ್‌ ನಿವಾಸಿಗಳ ಗೋಳು ಕೇಳುವವರಿಲ್ಲ

3 ವರ್ಷವಾದರೂ ಡಾಂಬರು ಕಾಣದ ರಸ್ತೆ

ಜಿ.ಶಿವಕುಮಾರ
Published 25 ಅಕ್ಟೋಬರ್ 2021, 20:28 IST
Last Updated 25 ಅಕ್ಟೋಬರ್ 2021, 20:28 IST
ಕೆಸರಿನ ರಾಡಿಯಿಂದ ಕೂಡಿರುವ ರಸ್ತೆ
ಕೆಸರಿನ ರಾಡಿಯಿಂದ ಕೂಡಿರುವ ರಸ್ತೆ   

ಬೆಂಗಳೂರು: ಹಳ್ಳದಂತಾಗಿರುವ ರಸ್ತೆ. ಮನೆಯ ಎದುರೇ ಹರಡಿಕೊಂಡಿರುವ ಕೆಸರಿನ ರಾಡಿ. ಅಲ್ಲಲ್ಲಿ ನಿಂತಿರುವ ಮಳೆ ನೀರು. ರಸ್ತೆ ದಾಟಲು ಹರಸಾಹಸ ಪಡುತ್ತಿರುವ ಮಕ್ಕಳು.

ಇದು ಯಲಹಂಕ ಅಟ್ಟೂರು ವಾರ್ಡ್‌ನ ದೊಡ್ಡಬೆಟ್ಟಹಳ್ಳಿ ಲೇಔಟ್‌ನ ಗಿರಿಧಾಮನಗರದ ಚಿತ್ರಣ.

2007ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ದೊಡ್ಡಬೆಟ್ಟಹಳ್ಳಿ ಕೂಡ ಒಂದು. ಅಭಿವೃದ್ಧಿಯ ಹೆಸರಿನಲ್ಲಿ ಮೊದಲಿದ್ದ ರಸ್ತೆಯನ್ನೂ ಅಗೆಯಲಾಗಿದ್ದು, ಮೂರು ವರ್ಷವಾದರೂ ಅದಕ್ಕೆ ಡಾಂಬರು ಹಾಕುವ ಕೆಲಸ ಆಗಿಲ್ಲ. ಹೀಗಾಗಿ, ಬೇಸಿಗೆ ಬಂದರೆ ರಸ್ತೆಯ ಮೇಲಿನ ದೂಳೆಲ್ಲಾ ಮನೆಯೊಳಗೆ ಸೇರುತ್ತದೆ. ಮಳೆ ಬಂದರೆ ವಾರ್ಡ್‌ನ ರಸ್ತೆಗಳೆಲ್ಲಾ ಕೆಸರು ಗದ್ದೆಗಳಂತಾಗುತ್ತವೆ. ಅವುಗಳ ಮೂಲಕ ಸಾಗುವುದೇ ವಾಹನ ಸವಾರರಿಗೆ ದೊಡ್ಡ ಸವಾಲು.

ADVERTISEMENT

ಈ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯರು ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಹೀಗಿದ್ದರೂ ಪರಿಸ್ಥಿತಿ ಕೊಂಚವೂ ಸುಧಾರಿಸಿಲ್ಲ.

‘ವಾರ್ಡ್‌ನಲ್ಲೆಲ್ಲಾ ಕೆಮ್ಮಣ್ಣಿನ ರಸ್ತೆಗಳೇ ಇವೆ. ಮಳೆ ಬಂದರೆ ಅವು ರಾಡಿಯಾಗುತ್ತವೆ. ಅಲ್ಲಲ್ಲಿ ಗುಂಡಿಗಳೂ ಬೀಳುತ್ತವೆ. ಆ ಮಾರ್ಗದಲ್ಲಿ ಬೈಕ್‌ ಅಥವಾ ಸೈಕಲ್‌ ಚಲಾಯಿಸುವುದು ಕಷ್ಟಸಾಧ್ಯ. ಕಾರುಗಳ ಸಂಚಾರವೂ ಸರಾಗವೇನಲ್ಲ. ಶಾಲಾ ಮಕ್ಕಳು ಹಾಗೂ ವೃದ್ಧರು ರಸ್ತೆ ದಾಟಲು ತಿಣುಕಾಡಬೇಕಾಗುತ್ತದೆ. ನಿತ್ಯದ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ತುಂತುರು ಮಳೆಯಾದರೆ ರಸ್ತೆಗಳು ಜಾರುತ್ತವೆ. ಮಕ್ಕಳು ಆಟ ಆಡಲು ಹೋದರೆ ಜಾರಿಬಿದ್ದು ಕೈಕಾಲಿಗೆ ಗಾಯ ಮಾಡಿಕೊಳ್ಳುವ ಅಪಾಯವಿದೆ’ ಎಂದು ರಂಗಸ್ವಾಮಿ ಅಳಲು ತೋಡಿಕೊಂಡರು.

‘ರಸ್ತೆಯ ಎರಡೂ ಬದಿಗಳಲ್ಲಿ ತಾತ್ಕಾಲಿಕವಾಗಿ ಚಪ್ಪಡಿ ಕಲ್ಲುಗಳನ್ನಾದರೂ ಹಾಕಿದರೆ ಪಾದಚಾರಿಗಳ ಪಡಿಪಾಟಲು ತಪ್ಪುತ್ತದೆ. ಆ ಕೆಲಸ ಮಾಡಲೂ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಯಾರಿಗಾದರೂ ಅನಾರೋಗ್ಯ ಬಾಧಿಸಿದರೆ ಈ ರಸ್ತೆಗಳ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸುವುದೂ ಕಷ್ಟ. ಭಾರಿ ವಾಹನಗಳು ಸಾಗಿದರೆ ರಸ್ತೆಯ ಮೇಲಿನ ನೀರು ಮನೆಯ ಗೋಡೆ ಹಾಗೂ ಕಾಂಪೌಂಡ್‌ ಮೇಲೆ ಸಿಡಿಯುತ್ತದೆ’ ಎಂದೂ ಅವರು ದೂರಿದರು.

‘ಶಾಸಕರನ್ನು ಭೇಟಿಯಾದಾಗಲೆಲ್ಲಾಒಳಚರಂಡಿ ಕಾಮಗಾರಿ ಮುಗಿದ ಬಳಿಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಾರೆ. ಮೂರು ವರ್ಷದಿಂದಲೂ ಅವರ ಮಾತು ಕೇಳಿ ಕೇಳಿ ಸಾಕಾಗಿ ಹೋಗಿದೆ. ಬಡಾವಣೆಯ ಜನರು ಡಾಂಬರು ರಸ್ತೆಗಳನ್ನು ಕಾಣಲು ಇನ್ನೆಷ್ಟು ವರ್ಷಗಳು ಬೇಕಾಗಬಹುದೋ’ ಎಂದು ಕಿರಣ್‌ ಬೇಸರ ವ್ಯಕ್ತಪಡಿಸಿದರು.ಈ ಬಗ್ಗೆ ಪ್ರತಿಕ್ರಿಯೆಗೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.