ADVERTISEMENT

ದಾಬಸ್ ಪೇಟೆ: ರಸ್ತೆ ಗುಂಡಿ, ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 23:00 IST
Last Updated 5 ನವೆಂಬರ್ 2023, 23:00 IST
ನರಸೀಪುರ ಬಳಿಯ ಮೋರಿ ಹತ್ತಿರ ಕಿತ್ತಿರುವ ರಸ್ತೆ
ನರಸೀಪುರ ಬಳಿಯ ಮೋರಿ ಹತ್ತಿರ ಕಿತ್ತಿರುವ ರಸ್ತೆ   

ದಾಬಸ್ ಪೇಟೆ: ದಾಬಸ್ ಪೇಟೆಯಿಂದ ಮಧುಗಿರಿ ಹಾಗೂ ಪಾವಗಡಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-3ರ ರಸ್ತೆಯು ನರಸೀಪುರ ತೋಪಿನ ಬಳಿ ಗುಂಡಿಗಳಿಂದ ಕೂಡಿದೆ. ಇದರಿಂದ ವಾಹನ ಸವಾರರು ಪರಿತಪಿಸುವಂತಾಗಿದೆ.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) -2ರಡಿ ಈ ರಸ್ತೆಯನ್ನು ಮಾಗಡಿ-ದಾಬಸ್ ಪೇಟೆ-ಕೊರಟಗೆರೆವರೆಗೆ ಸುಮಾರು 68 ಕಿ.ಮೀ. ಅಭಿವೃದ್ಧಿಪಡಿಸಲಾಗಿತ್ತು. ಈ ರಸ್ತೆ ಮಾರ್ಗದ ಮೂಲಕ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಆಂಧ್ರಪ್ರದೇಶದ ಮಿಡಗೇಶಿ, ಕಲ್ಯಾಣದುರ್ಗಕ್ಕೆ  ಸಂಪರ್ಕಿಸಲಿದೆ. ದೇವರಾಯನದುರ್ಗ, ಗೊರವನಹಳ್ಳಿ ಲಕ್ಷ್ಮಿ ದೇವಾಲಯ, ಮಧುಗಿರಿ ಏಕಶಿಲಾ ಬೆಟ್ಟ, ಪಾವಗಡದ ಶನಿಮಹಾತ್ಮ ದೇವಾಲಯಗಳಿಗೆ ಇದೇ ಮಾರ್ಗದಲ್ಲಿ ಸಾಗಬೇಕಿದೆ. ಒಂದು ವರ್ಷದಿಂದ ಈ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿವೆ.

ಸೋಂಪುರ ಕೈಗಾರಿಕಾ ಪ್ರದೇಶವಾಗಿರುವುದರಿಂದ, ಈ ರಸ್ತೆಯಲ್ಲಿ ಜನ ಸಂಚಾರ ಹೆಚ್ಚಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ವಾಹನ ಸವಾರರ ಪ್ರಮಾಣ ಹೆಚ್ಚಿರುತ್ತದೆ. ರಾತ್ರಿ ವೇಳೆ ಗುಂಡಿಗಳು ಕಾಣದೆ ಬಿದ್ದು ಗಾಯಗೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.  

ADVERTISEMENT

‘ಈ ರಸ್ತೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಭಾರ ತುಂಬಿದ ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳು ದಿನನಿತ್ಯ ಸಾಗುತ್ತಿವೆ. ಇದರಿಂದ ರಸ್ತೆ ಕಿತ್ತು ಹೋಗುತ್ತಿದೆ. ಇದೇ ರಸ್ತೆಯ ಇನ್ನೊಂದು ಮೋರಿಯ ಬಳಿಯೂ ರಸ್ತೆ ಗುಂಡಿ ಬಿದ್ದಿತ್ತು. ಸಂಬಂಧಿಸಿದವರು ಅಲ್ಲಷ್ಟೇ ರಸ್ತೆ ದುರಸ್ತಿ ಮಾಡಿ ಡಾಂಬರು ಹಾಕಿದ್ದಾರೆ. ಇಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಗುಂಡಿಗಳು ಹೆಚ್ಚಾಗಿವೆ’ ಎಂದು ಸವಾರರೊಬ್ಬರು ತಿಳಿಸಿದರು.

‘ಮೋರಿಯ ಬಳಿ ಬಿದ್ದಿರುವ ಗುಂಡಿ ಸರಿಪಡಿಸಲು ಗಮನಹರಿಸಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಜಿ.ರಮೇಶ್ ಆಗ್ರಹಿಸಿದರು.

ನರಸೀಪುರ ಬಳಿಯ ಮೋರಿ ಹತ್ತಿರ ಕಿತ್ತಿರುವ ರಸ್ತೆ 1
ನರಸೀಪುರ ಬಳಿಯ ಮೋರಿ ಹತ್ತಿರ ಕಿತ್ತಿರುವ ರಸ್ತೆ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.