ADVERTISEMENT

ಅಪಘಾತ ನಿಯಂತ್ರಣ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಇಂದಿನಿಂದ

ಅಪಘಾತ ನಿಯಂತ್ರಣ: ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 20:07 IST
Last Updated 31 ಡಿಸೆಂಬರ್ 2025, 20:07 IST
<div class="paragraphs"><p>ರಾಷ್ಟ್ರೀಯ ಹೆದ್ದಾರಿ-50 ರ ರಸ್ತೆ</p></div>

ರಾಷ್ಟ್ರೀಯ ಹೆದ್ದಾರಿ-50 ರ ರಸ್ತೆ

   

ಬೆಂಗಳೂರು: ‘ರಾಜ್ಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು, ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನವರಿ 1 ರಿಂದ ಜನವರಿ 31ರವರೆಗೆ ರಾಜ್ಯವ್ಯಾಪಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಆಯೋಜಿಸಲಿದೆ’ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರತಿ ವರ್ಷ 33 ಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು 12 ಸಾವಿರ ಮಂದಿ ಅಪಘಾತಗಳಲ್ಲಿ ದುರ್ಮರಣಕ್ಕೆ ಈಡಾಗುತ್ತಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಸುಪ್ರೀಂ ಕೋರ್ಟ್‌ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಸಂಯೋಜಿತ ರಸ್ತೆ ಅಪಘಾತ ಡೇಟಾಬೇಸ್ ಮತ್ತು ಸ್ಥಳದಲ್ಲೇ ರಸ್ತೆ ಅಪಘಾತ ಮಾಹಿತಿ ಸಂಗ್ರಹ ಯೋಜನೆಯ ಜಾರಿ ಮತ್ತು ಅನುಷ್ಠಾನದ ಅರಿವು ಮೂಡಿಸುವುದು. ವಾಹನ ಅಪಘಾತ ಸಂದರ್ಭದಲ್ಲಿ ನಗದು ರಹಿತ ಚಿಕಿತ್ಸೆ, ವಿಮಾ ಮೊತ್ತ ಪಾವತಿಗೆ ಸಂಬಂಧಿಸಿದಂತೆ ನಮೂನೆಗಳ ಭರ್ತಿ ಮತ್ತಿತರ ಅಂಶಗಳ ಕುರಿತು ತರಬೇತಿ, ಕಾರ್ಯಾಗಾರ ಹಮ್ಮಿಕೊಳ್ಳುವುದು. ಸಂವಾದ, ಸುವರ್ಣ ಅವಧಿ ಬಗ್ಗೆ ಅರಿವು ಮೂಡಿಸುವುದು. ಮಾಸ್ಟರ್ ಟ್ರೈನರ್‌ಗಳಿಂದ ಉನ್ನತ ಮಟ್ಟದ ತರಬೇತಿಯನ್ನು ಸಾರಿಗೆ, ಪೊಲೀಸ್, ಆರೋಗ್ಯ, ರಸ್ತೆ ಮಾಲೀಕತ್ವದ ಸಂಸ್ಥೆಗಳ ಅಧಿಕಾರಿ ಮತ್ತು ಮತ್ತು ಸಿಬ್ಬಂದಿಗೆ ನೀಡಲಾಗುವುದು ಎಂದು ಅವರು ವಿವರಿಸಿದರು.

‘ಬಿಎಂಟಿಸಿ, ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರಿಗೆ ಎಲೆಕ್ಟ್ರಿಕ್ ಬಸ್ ಚಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಕಾರ್ಯಕ್ರಮ, ಪ್ರತಿ ವಾರ ರಾಜ್ಯ ಮಟ್ಟದ ಸೆಮಿನಾರ್, ವಾಕಥಾನ್, ಮ್ಯಾರಾಥಾನ್ ವಿಂಟೇಜ್ ಕಾರ್ ರ‍್ಯಾಲಿ, ಬೈಕ್ ರ‍್ಯಾಲಿ, ಸೈಕಲ್ ಜಾಥಾ, ಮಾನವ ಸರಪಳಿ ನಿರ್ಮಾಣದ ಮೂಲಕ ಜಾಗೃತಿ, ಸಂಚಾರ ಲೈವ್ ಪ್ರಾತ್ಯಕ್ಷಿಕೆ, ವಾಣಿಜ್ಯ ವಾಹನ ಮಾಲೀಕರು ಮತ್ತು ಚಾಲಕರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸುವ ಕಾರ್ಯಾಗಾರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ರಚನೆ, ಕಿರು ನಾಟಕ, ಚಿತ್ರಕಲಾ ಸ್ಪರ್ಧೆ, ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಸುರಕ್ಷತೆಯ ಘೋಷಣೆಗಳ ಪ್ರದರ್ಶನ, ಮಾಧ್ಯಮಗಳಲ್ಲಿ ಪ್ರಚಾರ, ರೇಡಿಯೊ ಜಿಂಗಲ್ಸ್ ಮತ್ತು ಸಿನಿಮಾ ಮಂದಿರಗಳಲ್ಲಿ ಜಾಹೀರಾತು ಪ್ರದರ್ಶನಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುತ್ತೇವೆ. ಉತ್ತಮ ಸಾಧನೆ ಮಾಡಿದ ಜಿಲ್ಲೆಗಳಿಗೆ ಬಹುಮಾನ ನೀಡುತ್ತೇವೆ’ ಎಂದು ಅವರು ತಿಳಿಸಿದರು.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಜನರಲ್ಲಿ ಶೇ 28 ಪಾದಚಾರಿಗಳಾಗಿದ್ದಾರೆ. ಶೇ 90ರಷ್ಟು ಅಪಘಾತಗಳಿಗೆ ಅತಿ ವೇಗದ ಚಾಲನೆಯೇ ಕಾರಣ. ಉಳಿದಂತೆ ಮದ್ಯಪಾನ ಮಾಡಿ ಚಾಲನೆ ಮಾಡುವುದು, ಮೊಬೈಲ್ ಬಳಕೆ, ಕಳಪೆ ಮೂಲ ಸೌಕರ್ಯ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಕೆ ಮಾಡದೇ ಇರುವುದು ಮುಂತಾದ ಕಾರಣಗಳಿಂದ ಸಂಭವಿಸುತ್ತಿವೆ ಎಂದು ಅವರು ತಿಳಿಸಿದರು.

ಪ್ರಾಧಿಕಾರದ ಜೊತೆ ಸಾರಿಗೆ, ಪೊಲೀಸ್, ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ, ಸ್ಥಳೀಯ ವಕೀಲರ ಸಂಘ, ವಿಮಾ ಕಂಪನಿಗಳ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು ಸಹಯೋಗ ನೀಡಿದ್ದು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂದು ಎಂದು ಶಶಿಧರ್ ಶೆಟ್ಟಿ ತಿಳಿಸಿದರು.

ಸಾರಿಗೆ ಇಲಾಖೆಯ ಆಯುಕ್ತ ಎ.ಎಂ.ಯೋಗೇಶ್ ಮಾತನಾಡಿ, ಅಪ್ರಾಪ್ತ ವಯಸ್ಕರಿಂದಲೂ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು ಈ ಬಗ್ಗೆ ಪಿಯು, ಡಿಗ್ರಿ ಕಾಲೇಜುಗಳಿಗೆ ತೆರಳಿ ನಾವು ಜಾಗೃತಿ ಮೂಡಿಸುತ್ತೇವೆ. ಎಲೆಕ್ಟ್ರಿಕ್ ವಾಹನಗಳ ಚಾಲಕರಿಗೆ ಈಗಾಗಲೇ ಎರಡು ಹಂತದ ತರಬೇತಿ ನೀಡಿದ್ದು ಅವರಿಗೂ ಜಾಗೃತಿ ಮೂಡಿಸುತ್ತೇವೆ’ ಎಂದು ಹೇಳಿದರು.

ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.