ADVERTISEMENT

ಸರ ದೋಚಲೆತ್ನಿಸಿ ಸಿಕ್ಕಿಬಿದ್ದಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:02 IST
Last Updated 3 ಜುಲೈ 2018, 20:02 IST
ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದ ಹೇಮಾ
ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದ ಹೇಮಾ   

ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಕಂದಾಯ ಇಲಾಖೆ ಇನ್‌ಸ್ಪೆಕ್ಟರ್ ಪುಟ್ಟೇಗೌಡ ಅವರ ಪತ್ನಿಯ ಕಣ್ಣಿಗೆ ಖಾರದ ಪುಡಿ ಎರಚಿ, ಚಿನ್ನದ ಸರ ದೋಚಲೆತ್ನಿಸಿದ ಹೇಮಾವತಿ ಅಲಿಯಾಸ್ ಹೇಮಾ (40) ಎಂಬುವರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬಾಗಲಗುಂಟೆ ಸಮೀಪದ ಭುವನೇಶ್ವರಿನಗರದಲ್ಲಿ ಜೂನ್ 29ರಂದು ಈ ಘಟನೆ ನಡೆದಿದೆ. ಪೀಣ್ಯದ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ತಿಪಟೂರಿನ ಹೇಮಾ, ಆ ದಿನ ಸಂಜೆ 5.30ರ ಸುಮಾರಿಗೆ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಲೆಂದು ಭುವನೇಶ್ವರಿನಗರಕ್ಕೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪುಟ್ಟೇಗೌಡ ಅವರ ಮನೆ ಗೇಟ್‌ಗೆ ನೇತುಹಾಕಿದ್ದ ‘ಮನೆ ಬಾಡಿಗೆಗಿದೆ’ ಎಂಬ ಫಲಕವನ್ನು ಕಂಡ ಹೇಮಾ, ಮನೆ ಕೇಳುವ ನೆಪದಲ್ಲೇ ಬಾಗಿಲು ಬಡಿದಿದ್ದಾರೆ. ಹೊರಬಂದ ‍ಪುಟ್ಟೇಗೌಡ ಪತ್ನಿ ಶಿವಮ್ಮ, ‘ಮೊದಲ ಮಹಡಿಯ ಮನೆ ಖಾಲಿ ಇದೆ. ಹೋಗಿ ನೋಡಿಕೊಂಡು ಬನ್ನಿ’ ಎಂದು ಕೀ ಕೊಟ್ಟಿದ್ದಾರೆ. ಆಗ ಹೇಮಾ, ‘ನೀವೇ ಬಂದು ಮನೆ ತೋರಿಸಿ’ ಎಂದಿದ್ದಾರೆ.

ADVERTISEMENT

ಅದಕ್ಕೆ ಒಪ್ಪಿ ಶಿವಮ್ಮ ಕೂಡ ಜತೆಗೆ ಹೋಗಿದ್ದಾರೆ. ಅವರು ಮನೆಯೊಳಗೆ ಹೋಗುತ್ತಿದ್ದಂತೆಯೇ ಬಾಗಿಲು ಹಾಕಿಕೊಂಡ ಹೇಮಾ, ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಈ ಹಂತದಲ್ಲಿ ಆರೋಪಿ ತಳ್ಳಿದಾಗ ಶಿವಮ್ಮ ಕೆಳಗೆ ಬಿದ್ದಿದ್ದಾರೆ.

ಆಗ ಕುತ್ತಿಗೆಯಿಂದ ಸರ ಕಿತ್ತುಕೊಂಡ ಹೇಮಾ, ಹೊರಗಿನಿಂದ ಚಿಲಕ ಹಾಕಿಕೊಂಡು ಹೊರಟಿದ್ದಾರೆ. ಕೂಡಲೇ ಸೆರಗಿನಿಂದ ಕಣ್ಣನ್ನು ಒರೆಸಿಕೊಂಡಿರುವ ಶಿವಮ್ಮ, ಕಿಟಕಿಯಿಂದ ಜೋರಾಗಿ ‘ಕಳ್ಳಿ.. ಕಳ್ಳಿ..’ ಎಂದು ಚೀರಿಕೊಂಡಿದ್ದಾರೆ. ಆ ಕೂಗು ಕೇಳಿ ಸ್ಥಳೀಯರ ಜಮಾಯಿಸುತ್ತಿದ್ದಂತೆಯೇ ಹೇಮಾ ಓಡಲಾರಂಭಿಸಿದ್ದಾರೆ. ಆಗ ಜನ ಬೆನ್ನಟ್ಟಿ ಅವರನ್ನು ಹಿಡಿದು ಬಾಗಲಗುಂಟೆ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

**

‘ಸಾಲಗಾರನ ಕಾಟಕ್ಕೆ ಸರಗಳ್ಳಿಯಾದೆ’

‘ಕುಟುಂಬ ನಿರ್ವಹಣೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಸಾಲ ಕೊಟ್ಟವನು ಹಣ ಮರಳಿಸುವಂತೆ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಒಂಟಿ ಮಹಿಳೆಯರಿಂದ ಚಿನ್ನಾಭರಣ ದೋಚಲು ನಿರ್ಧರಿಸಿದ್ದೆ’ ಎಂದು ಹೇಮಾ ಹೇಳಿಕೆ ಕೊಟ್ಟಿರುವುದಾಗಿ ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.