ಬೆಂಗಳೂರು: ಮಲ್ಲೇಶ್ವರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಒಂಟಿಯಾಗಿ ವಾಸವಿದ್ದ ನಳಿನಾ ನಾಗರಾಜ್ (80) ಎಂಬುವರಿಗೆ ಮಚ್ಚಿನಿಂದ ಹೊಡೆದು ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಡಿ ಆರ್. ಸಭಾಪತಿ (45) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಸಭಾಪತಿ, ಕೆಲ ತಿಂಗಳ ಹಿಂದಷ್ಟೇ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಉದ್ಯಾನ ಸ್ವಚ್ಛತೆ ಹಾಗೂ ತೆಂಗಿನ ಮರವೇರಿ ಕಾಯಿ ಕೀಳುವ ಕೆಲಸ ಮಾಡುತ್ತಿದ್ದರು. ಸದ್ಯ ಅವರಿಂದ ₹ 2 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ವೃದ್ಧೆ ನಳಿನಾ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ನಿವೃತ್ತ ಅಧಿಕಾರಿ. ಅವರ ಪತಿ ನಾಗರಾಜ್, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ವಿಜ್ಞಾನಿ ಆಗಿದ್ದರು. ಪತಿ ತೀರಿಕೊಂಡಿದ್ದರಿಂದ ನಳಿನಾ ಅವರು ಒಂಟಿಯಾಗಿ ವಾಸವಿದ್ದರು. ಅವರ ಮಕ್ಕಳು ಬೇರೆಡೆ ನೆಲೆಸಿದ್ದಾರೆ’ ಎಂದೂ ತಿಳಿಸಿದರು.
ಕಾಯಿ ಕೀಳುವಾಗ ಸಂಚು: ‘ನಳಿನಾ ಅವರ ಮನೆ ಎದುರು ತೆಂಗಿನ ಮರಗಳಿವೆ. ಅವುಗಳ ಕಾಯಿ ಕೀಳಿಸಲು ಕೂಲಿ ಕೆಲಸಗಾರರಿಗಾಗಿ ಹುಡುಕಾಡುತ್ತಿದ್ದರು. ಮೊದಲ ಬಾರಿ ಮನೆಗೆ ಹೋಗಿದ್ದ ಸಭಾಪತಿ, ಕಾಯಿ ಕಿತ್ತುಕೊಟ್ಟಿದ್ದರು. ವೃದ್ಧೆ ಒಬ್ಬರೇ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ, ಸುಲಿಗೆ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಎರಡನೇ ಬಾರಿ ಮನೆಗೆ ಹೋಗಿದ್ದ ಆರೋಪಿ, ಮಚ್ಚಿನಿಂದ ವೃದ್ಧೆ ಮೇಲೆ ಹಲ್ಲೆ ಮಾಡಿದ್ದರು. ಚಿನ್ನದ ಸರ ಕಿತ್ತುಕೊಂಡು ತಮ್ಮೂರಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಘಟನೆ ಬಗ್ಗೆ ನಳಿನಾ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಯಿತು’ ಎಂದೂ ತಿಳಿಸಿದರು.
‘ಮದ್ಯವ್ಯಸನಿಯಾಗಿದ್ದ ಆರೋಪಿ, ಮಲ್ಲೇಶ್ವರದ ಕಟ್ಟಡವೊಂದರಲ್ಲಿ ನಿತ್ಯವೂ ಮಲಗುತ್ತಿದ್ದರು. ದುಡಿದ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ಮದ್ಯ ಕುಡಿಯಲು ಹಾಗೂ ನಿತ್ಯದ ಖರ್ಚಿಗೆಂದು ಕಳ್ಳತನ ಮಾಡಿದ್ದರೆಂಬುದು ಗೊತ್ತಾಗಿದೆ’ ಎಂದೂ ಪೊಲೀಸರು ವಿವರಿಸಿದರು.
‘ಹಲ್ಲೆಯಿಂದ ಗಾಯಗೊಂಡಿದ್ದ ನಳಿನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.