ADVERTISEMENT

ಬೆರಳಿಗೆ ಚಾಕುವಿನಿಂದ ಇರಿದು ಸುಲಿಗೆಗೆ ಯತ್ನ: ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 22:04 IST
Last Updated 4 ಜುಲೈ 2020, 22:04 IST

ಬೆಂಗಳೂರು: ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಕೈ ಬೆರಳಿಗೆ ಚಾಕುವಿನಿಂದ ಇರಿದು ಸುಲಿಗೆಗೆ ಯತ್ನಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಸವಾರ ಗೌರವ್ ಅಗರವಾಲ್ ಎಂಬುವರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಟ್ವೀಟ್‌ ಮೂಲಕ ದೂರು ನೀಡಿದ್ದಾರೆ. ಮಡಿವಾಳ ಠಾಣೆ ಸದ್ಯ ಸೀಲ್‌ಡೌನ್‌ ಆಗಿರುವುದರಿಂದ, ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

‘ಖಾಸಗಿ ಕಂಪನಿ ಉದ್ಯೋಗಿಯಾದ ಗೌರವ್ ಹಾಗೂ ಅವರ ಸ್ನೇಹಿತ, ಜೂನ್ 27ರಂದು ರಾತ್ರಿ ಕೆಲಸ ಮುಗಿಸಿಕೊಂಡು ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್‌ ಬಳಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಮೊಬೈಲ್ ಮತ್ತು ಪರ್ಸ್‌ ನೀಡುವಂತೆ ಚಾಕು ತೋರಿಸಿ ಬೆದರಿಸಿದ್ದರು. ಈ ಸಂಗತಿ ಗೌರವ್‌ ನೀಡಿರುವ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮೊಬೈಲ್ ಮತ್ತು ಪರ್ಸ್ ನೀಡಲು ಒಪ್ಪದಿದ್ದಾಗ ಗೌರವ್ ಅವರ ಬೆರಳಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ. ಇತರೆ ದುಷ್ಕರ್ಮಿಗಳು, ಗೌರವ್ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ’ ಎಂದೂ ತಿಳಿಸಿದರು.

‘ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಗೌರವ್ ದೂರು ನೀಡಿದ್ದಾರೆ. ಘಟನೆ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.