ADVERTISEMENT

ಬೆಂಗಳೂರು: ಬೆದರಿಸಿ ₹2 ಕೋಟಿ ನಗದು ದರೋಡೆ

ಹಣ ಎಣಿಸುವಾಗ ಮಳಿಗೆಗೆ ನುಗ್ಗಿದ 6–7 ಜನರಿಂದ ಕೃತ್ಯ l ಉದ್ಯಮಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 19:47 IST
Last Updated 27 ಜೂನ್ 2025, 19:47 IST
   

ಬೆಂಗಳೂರು: ಉದ್ಯಮಿಯೊಬ್ಬರಿಗೆ ಚಾಕುವಿನಿಂದ ಹೆದರಿಸಿ ₹2 ಕೋಟಿ ನಗದು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎಸ್. ಪಾಳ್ಯದಲ್ಲಿ ನಡೆದಿದೆ
ಉದ್ಯಮಿ ಶ್ರೀಹರ್ಷ ವಿ. ಅವರು ನೀಡಿರುವ ದೂರಿನ ಅನ್ವಯ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಕೆಂಗೇರಿಯ ಶ್ರೀಹರ್ಷ ತಮ್ಮ ಉದ್ಯಮಕ್ಕೆ‌ ಅಗತ್ಯವಿರುವ ಯಂತ್ರವೊಂದನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಬೇಕಿದ್ದ ಕಾರಣ ₹ 2 ಕೋಟಿ ನಗದನ್ನು ಯುಎಸ್‌ಡಿಐಟಿಗೆ ಬದಲಾವಣೆ ಮಾಡಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಸ್ನೇಹಿತರೊಬ್ಬರ ಮೂಲಕ ಶ್ರೀಹರ್ಷ ಅವರಿಗೆ ಬೆಂಜಮಿನ್ ಹರ್ಷ ಅವರ ಪರಿಚಯವಾಗಿತ್ತು. ಹಣ ಬದಲಾವಣೆ ಸಲುವಾಗಿ ಜೂನ್ 25ರಂದು ಎಂ.ಎಸ್.ಪಾಳ್ಯದ ಎ.ಕೆ. ಎಂಟರ್‌ಪ್ರೈಸಸ್‌ನಲ್ಲಿ ಬೆಂಜಮಿನ್ ಹರ್ಷ ಹಾಗೂ ಶ್ರೀಹರ್ಷ ಭೇಟಿಯಾಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಶ್ರೀಹರ್ಷ, ಬೆಂಜಮಿನ್ ಮತ್ತು ಆತನ ಇಬ್ಬರು ಸ್ನೇಹಿತರು ₹2 ಕೋಟಿ ಹಣ ಎಣಿಸುವಾಗ ಏಕಾಏಕಿ ಅಂಗಡಿಗೆ ನುಗ್ಗಿದ್ದ 6-7 ಜನರು ಚಾಕುವಿನಿಂದ ಶ್ರೀಹರ್ಷ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕುತ್ತಿಗೆ ಬಳಿ ಚಾಕು ಇಟ್ಟು ಬೆಂಜಮಿನ್ ಹರ್ಷ, ಶ್ರೀಹರ್ಷ ಮತ್ತು ಅವರ ಸ್ನೇಹಿತರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಹಣವನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಕೊನೆಗೆ ಕಷ್ಟಪಟ್ಟು ಕೊಠಡಿ ಬಾಗಿಲು ಹಾಗೂ ಶೆಟರ್ ತೆರೆದಾಗ ಬೆಂಜಮಿನ್ ಮತ್ತು ಅವರ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಶ್ರೀಹರ್ಷ ದೂರಿದ್ದಾರೆ.

ADVERTISEMENT

ಬೆಂಜಮಿನ್ ಹರ್ಷ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ.
₹ 2 ಕೋಟಿ ನಗದು ಇಟ್ಟುಕೊಂಡಿದ್ದ ಬಗ್ಗೆ ದಾಖಲೆ ನೀಡುವಂತೆ ಸೂಚಿಸಲಾಗಿದೆ. ಬೆಂಜಮಿನ್ ಸೇರಿದಂತೆ ಇತರರು ಸಂಚು ರೂಪಿಸಿ ಹರ್ಷ ಬಳಿ ಇರುವ ನಗದು ಹಾಗೂ ನಾಲ್ಕು ಮೊಬೈಲ್ ಕಸಿದು ಪರಾರಿ ಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.

₹2 ಕೋಟಿ ನಗದು ಹವಾಲ ವಹಿವಾಟಿನ ಕುರಿತು ಅನುಮಾನವಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳ ಬಂಧನ ಬಳಿಕ ಕೃತ್ಯದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.