ADVERTISEMENT

ರಾಜಕಾಲುವೆಗೆ ಇಳಿಯಲೇ ಇಲ್ಲ ರೊಬೋಟಿಕ್‌ ಯಂತ್ರಗಳು

ಹೂಳೆತ್ತುವ ಕಾಮಗಾರಿ: ಷರತ್ತು ಉಲ್ಲಂಘಿಸಿದರೂ ಗುತ್ತಿಗೆದಾರರ ವಿರುದ್ಧ ಕ್ರಮವಿಲ್ಲ

ಪ್ರವೀಣ ಕುಮಾರ್ ಪಿ.ವಿ.
Published 4 ಅಕ್ಟೋಬರ್ 2020, 20:17 IST
Last Updated 4 ಅಕ್ಟೋಬರ್ 2020, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜಕಾಲುವೆಗಳ ಹೂಳೆತ್ತುವ ಪ್ರಕ್ರಿಯೆಗೆ ಹೈಟೆಕ್‌ ಸ್ಪರ್ಶ ನೀಡಲು ನಿರ್ಧರಿಸಿದ್ದಬಿಬಿಎಂಪಿ ಈ ಸಲುವಾಗಿ 2018ರಲ್ಲಿ ಟೆಂಡರ್‌ ಕರೆದಿತ್ತು. ಎಂಟು ರೋಬೋಟಿಕ್‌ ಎಸ್ಕವೇಟರ್‌ ಯಂತ್ರಗಳನ್ನು ಬಳಸಿ ಹೂಳೆತ್ತುವ ಕಾಮಗಾರಿಗೆ 2019ರ ಏ.09ರಂದು ಕಾರ್ಯದೇಶ ನೀಡಿತ್ತು. ಇದಾಗಿ ಒಂದೂವರೆ ವರ್ಷದ ಬಳಿಕವೂ ರೊಬೋಟಿಕ್‌ ಯಂತ್ರಗಳು ರಾಜಕಾಲುವೆಗಳಿಗೆ ಇಳಿದೇ ಇಲ್ಲ!

ಈ ಹಿಂದೆ ಗಿಡಗಂಟಿಗಳ ತೆರವು ಹಾಗೂ ಹೂಳೆತ್ತುವಿಕೆಯನ್ನು ತುಂಡು ಗುತ್ತಿಗೆ ನೀಡಲಾಗುತ್ತಿತ್ತು. ಬಿಲ್‌ಗಳು ಸಕಾಲದಲ್ಲಿ ಪಾವತಿ ಆಗುವುದಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರು ತುರ್ತು ಸಂದರ್ಭದಲ್ಲಿ ಕಾಲುವೆ ಹೂಳೆತ್ತಲು ಹಿಂದೇಟು ಹಾಕುತ್ತಿದ್ದರು. ಸಕಾಲದಲ್ಲಿ ಸ್ವಚ್ಛತಾ ಕಾರ್ಯ ನಡೆಯದ ಕಾರಣ ರಾಜಕಾಲುವೆಗಳು ಕಟ್ಟಿಕೊಳ್ಳುತ್ತಿದ್ದವು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲು ಬಿಬಿಎಂಪಿ ನಿರ್ಧರಿಸಿತ್ತು.

ಸ್ವಯಂಚಾಲಿತವಾಗಿ ಹೂಳೆತ್ತಿ ರಾಜಕಾಲುವೆ ನಿರ್ವಹಣೆ ಮಾಡಲು 2018ರ ಅ. 27ರಂದು ಪಾಲಿಕೆ ಟೆಂಡರ್‌ ಕರೆದಿತ್ತು. 2019ರ ಮಾ. 8ರಂದು ಟೆಂಡರ್‌ಗೆ ಮಂಜೂರಾತಿ ನೀಡಲಾಗಿದೆ. ಈ ಕಾಮಗಾರಿಯನ್ನು ಯೋಗಾ ಆ್ಯಂಡ್‌ ಕೋ ಸಂಸ್ಥೆಯ ‍ಪಿ.ನಾಗರಾಜು ಅವರಿಗೆ ಮೂರು ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಕಾಮಗಾರಿಯ ವಾರ್ಷಿಕ ವೆಚ್ಚ ₹ 36.64 ಕೋಟಿ.ಒಪ್ಪಂದ ಜಾರಿಯಾದ ನಾಲ್ಕು ತಿಂಗಳ ಒಳಗೆ ಸಂಸ್ಥೆಯು ಎಂಟು ರೊಬೋಟಿಕ್‌ ಯಂತ್ರಗಳನ್ನು ಬಳಸಿ ಹೂಳೆತ್ತಬೇಕಿತ್ತು. ಷರತ್ತು ಉಲ್ಲಂಘಿಸಿದ್ದರೂ ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿಲ್ಲ. ಅದರ ಬದಲು ಗುತ್ತಿಗೆ ಸಂಸ್ಥೆಗೆ ₹ 10.46 ಕೋಟಿ ಪಾವತಿ ಮಾಡಲಾಗಿದೆ.

ADVERTISEMENT

ಈ ಟೆಂಡರ್‌ ಷರತ್ತಿನ ಪ್ರಕಾರ ರಾಜಕಾಲುವೆ ನಿರ್ವಹಣೆಗೆ ಅಗತ್ಯವಿರುವ ಸಲಕರಣೆ, ಸಾಮಗ್ರಿ ಹಾಗೂ ಅಗತ್ಯ ಮಾನವ ಸಂಪನ್ಮೂಲವನ್ನು ಪೂರೈಸುವ ಜವಾಬ್ದಾರಿಯು ಗುತ್ತಿಗೆ ವಹಿಸಿಕೊಂಡ ಸಂಸ್ಥೆಯದು. ಎತ್ತಿದ ಹೂಳನ್ನು ಹೈಡ್ರಾಲಿಕ್‌ ಬಾಗಿಲಿನ ವ್ಯವಸ್ಥೆ ಹೊಂದಿರುವ ಟಿಪ್ಪರ್‌ಗಳ ಮೂಲಕ ಸಾಗಿಸಬೇಕು. ಈ ಟಿಪ್ಪರ್‌ಗಳು ಹನಿ ನೀರೂ ಹೊರಗೆ ಸೋರದಂತೆ ತಡೆಯುವ ವ್ಯವಸ್ಥೆ (ಗ್ಯಾಸ್ಕೆಟ್‌) ಹೊಂದಿರಬೇಕು. ಅದ್ಯಾವುದೂ ಪಾಲನೆ ಆಗಿಲ್ಲ ಎಂಬ ದೂರುಗಳಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ಗುತ್ತಿಗೆದಾರರಿಗೆ ಬಿಬಿಎಂಪಿ ವಿಧಿಸಿದ ಷರತ್ತುಗಳು

8 – ರೊಬೋಟಿಕ್‌ ಯಂತ್ರಗಳನ್ನು ಹೂಳೆತ್ತಲು ಹೊಂದಿರಬೇಕು

15 – ಟಿಪ್ಪರ್‌ ಲಾರಿಗಳನ್ನು ಕ್ವಾರಿಗೆ ಹೂಳನ್ನು ಸಾಗಿಸಲು ಹೊಂದಿರಬೇಕು

10 ಕಿ.ಮೀ. – ದೂರಕ್ಕೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಬೇಕು

2 – ಪ್ರತಿ ಕಿ.ಮೀ. ಕಾಲುವೆ ನಿರ್ವಹಣೆಗೆ ನೇಮಿಸಬೇಕಾದ ಕಾರ್ಮಿಕರ ಸಂಖ್ಯೆ

ರೊಬೋಟಿಕ್‌ ಯಂತ್ರದ ವಿಶೇಷವೇನು?

ರೊಬೋಟಿಕ್‌ ಯಂತ್ರಗಳು ರಾಜಕಾಲುವೆಯ ಅಗಲಕ್ಕೆ ಅನುಗುಣವಾಗಿ ಗಾತ್ರವನ್ನು ಬದಲು ಮಾಡಿಕೊಳ್ಳುತ್ತವೆ. ಎಂತಹ ಏರು ತಗ್ಗುಗಳನ್ನೂ ಹತ್ತಿಳಿಯುತ್ತವೆ. ಆದರೆ, ಸಾಮಾನ್ಯ ಜೆಸಿಬಿಯಲ್ಲಿ ಇದು ಸಾಧ್ಯವಿಲ್ಲ.

ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯ ಹೊಣೆಗಳು

– ರಾಜಕಾಲುವೆಗಳ ಹೂಳೆತ್ತಿ, ಅದನ್ನು ಬೇರೆ ಕಡೆ ಸಾಗಿಸಿ ವಿಲೇವಾರಿ ಮಾಡುವುದು

– ನೀರಿನಲ್ಲಿ ತೇಲುವ ಕಸ ಬೇರ್ಪಡಿಸಿ ವಿಲೇ ಮಾಡುವುದು

– ಗಿಡಗಂಟಿ ಬೆಳೆಯದಂತೆ ನೋಡಿಕೊಳ್ಳುವುದು

– ತಡೆಗೋಡೆ ನಿರ್ಮಾಣ

– ತಡೆಗೋಡೆಯ ಕಲ್ಲುಗಳ ಸಂದುಗಳನ್ನು ಬಲಪಡಿಸುವುದು

– ರಾಜಕಾಲುವೆಗಳಿಗೆ ಕಸ ಹಾಕದಂತೆ ತಡೆಯುವುದು

ಅಂಕಿ ಅಂಶ

3 ವರ್ಷಗಳು – ಗುತ್ತಿಗೆ ಅವಧಿ

₹ 69,390 – ಪ್ರತಿ ಕಿ.ಮೀ. ಉದ್ದದ ರಾಜಕಾಲುವೆ ಹೂಳೆತ್ತಲು ಸಂಸ್ಥೆಗೆ ಪಾವತಿಸುವ ಮೊತ್ತ

842 ಕಿ.ಮೀ – ನಗರದಲ್ಲಿರುವ ರಾಜಕಾಲುವೆಯ ಒಟ್ಟು ಉದ್ದ

440 ಕಿ.ಮೀ – ವಾರ್ಷಿಕ ನಿರ್ವಹಣೆ ವ್ಯಾಪ್ತಿಗೆ ಬರುವ ರಾಜಕಾಲುವೆ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.