ಸಾಂದರ್ಭಿಕ ಚಿತ್ರ
ಬೆಂಗಳೂರು: ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ವಿರೂಪಗೊಂಡ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈವರೆಗೂ ಒಂದು ಸಾವಿರ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮತ್ತು ಕನ್ಸಲ್ಟೆಂಟ್ ವಿಭಾಗದ ಮುಖಸ್ಥ ಡಾ. ಎಸ್ ವಿದ್ಯಾಧರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆನ್ನುಮೂಳೆ ಊನತೆಯಿಂದ ಸಮಸ್ಯೆ ಎದುರಿಸುತ್ತಿದ್ದ ಹಲವರಿಗೆ ರೊಬೊಟಿಕ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸಮಸ್ಯೆ ನಿವಾರಣೆಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಬಾಲಕನಿಗೆ ಬೆನ್ನುಮೂಳೆ ವಿರೂಪಗೊಂಡು, ದೈನಂದಿನ ಚಟುವಟಿಕೆ ಕಷ್ಟವಾಗಿತ್ತು. ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ವಿರೂಪಗೊಂಡ ಬೆನ್ನುಮೂಳೆ ಸರಿಪಡಿಸಿ, ಸ್ಕ್ರೂ ಅಳವಡಿಸಲಾಯಿತು. ಇದೇ ರೀತಿ, ಇಲ್ಲಿನ ಯುವಕನೊಬ್ಬ ಬೆನ್ನುಮೂಳೆ ಊನತೆಯಿಂದ ಸಮಸ್ಯೆ ಎದುರಿಸುತ್ತಿದ್ದ. ಆತನಿಗೂ ಇದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವಿವರಿಸಿದರು.
ನಿರಂತರ ಒಂದೆಡೆ ಕುಳಿತು ಕೆಲಸ ಮಾಡುವುದು, ಹೆಚ್ಚು ಹೊತ್ತು ವಾಹನ ಚಲಾಯಿಸುವುದು, ಭಾರವಾದ ವಸ್ತುಗಳನ್ನು ಎತ್ತುವುದರಿಂದ ಬೆನ್ನುನೋವಿನ ಸಮಸ್ಯೆ ಹೆಚ್ಚಾಗುತ್ತಿದೆ. ಆರಂಭದಲ್ಲಿಯೇ ಕಾಯಿಲೆ ಪತ್ತೆಹಚ್ಚಿ, ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದರು.
11 ವರ್ಷದ ಬಾಲಕ ತ್ರಿಭುವನ್ ಗೌಡ ಮತ್ತವರ ಪೋಷಕರು ತಮ್ಮ ಮಗ ಅನುಭವಿಸಿದ ಬೆನ್ನುಮೂಳೆಯ ಸಮಸ್ಯೆ ಹಾಗೂ ರೊಬೊಟಿಕ್ ಸರ್ಜರಿ ಹೇಗೆ ಸಹಕಾರಿಯಾಯಿತು ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡರು.
‘ಮಗನಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ಹೇಗೆ ಮಾಡುತ್ತಾರೆ ಎಂಬ ಭಯವಿತ್ತು. ಆದರೆ, ವೈದ್ಯರು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ದು, ಭರವಸೆ ಮೂಡಿತು. ಈಗ ಮಗನ ಆರೋಗ್ಯದಲ್ಲಿ ಬದಲಾವಣೆ ಕಂಡಿದೆ’ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.