ADVERTISEMENT

ರೋಹಿಂಗ್ಯಾ ಸಮುದಾಯದ ಏಳು ಮಂದಿ ಏರ್‌ಪೋರ್ಟ್‌ನಲ್ಲಿ ಬಂಧನ

ಅಕ್ರಮವಾಗಿ ಮಲೇಷ್ಯಾಕ್ಕೆ ಹೊರಟಿದ್ದರು * ಪಾಸ್‌ಪೋರ್ಟ್ ಏಜೆಂಟ್‌ಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 20:00 IST
Last Updated 15 ಫೆಬ್ರುವರಿ 2019, 20:00 IST
ರೋಹಿಂಗ್ಯಾ ಸಮುದಾಯದವರು
ರೋಹಿಂಗ್ಯಾ ಸಮುದಾಯದವರು   

ಬೆಂಗಳೂರು: ನಕಲಿ ‌ದಾಖಲೆಗಳ ಮೂಲಕ ಮಲೇಷ್ಯಾಕ್ಕೆ ಹಾರುವ ಯತ್ನದಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮ್ಯಾನ್ಮಾರ್ ದೇಶದ ಏಳು ಮಂದಿ ರೋಹಿಂಗ್ಯಾ ಸಮುದಾಯದವರು ಗುರುವಾರ ರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಕ್ರಮ ವಲಸಿಗರಾದ ಆಸ್ಮಾ ಬೇಗಂ, ರೆಹನಾ ಬೇಗಂ, ಮಹಮದ್ ತಾಹೀರ್, ಓಂಕಾರ್ ಫಾರೂಕ್, ಮಹಮದ್ ಹಾಲೆಕ್, ಮಹಮದ್ ಮುಸ್ತಫಾ ಹಾಗೂ ರಜತ್ ಮಂಡಲ್ ಎಂಬುವರನ್ನು ಬಂಧಿಸಲಾಗಿದೆ. ಇವರಿಗೆ ನೆರವಾಗಿದ್ದ ಹೈದರಾಬಾದ್‌ನ ಅಬ್ದುಲ್ ಅಲೀಮ್ ಸೇರಿದಂತೆ ಮೂವರು ಟ್ರಾವೆಲ್ ಏಜೆಂಟ್‌ಗಳ ಶೋಧ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

‘ಆರೋಪಿಗಳು ಅಕ್ರಮವಾಗಿ ಮಲೇಷ್ಯಾಕ್ಕೆ ಪ್ರಯಾಣಿಸುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಗುರುವಾರ ಸಂಜೆ ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್ ಅವರಿಗೆ ಮಾಹಿತಿ ಬಂದಿತ್ತು. ಕೂಡಲೇ ಅವರು ಎಸಿಪಿ ಮೋಹನ್‌ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಿದ್ದರು. ಕೆಐಎನಲ್ಲಿ ವಲಸೆ ವಿಭಾಗದ ಅಧಿಕಾರಿಗಳ ನೆರವಿನಿಂದ ಅವರನ್ನು ಸೆರೆ ಹಿಡಿಯಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ರಂಗಾರೆಡ್ಡಿ ವಾಸಿಗಳಂತೆ: ಮ್ಯಾನ್ಮಾರ್‌ ದೇಶದಿಂದ ಗಡಿಪಾರು ಶಿಕ್ಷೆಗೆ ಒಳಗಾಗಿದ್ದ 30ಕ್ಕೂ ಹೆಚ್ಚು ರೋಹಿಂಗ್ಯಾ ಸಮುದಾಯದವರು, 2013ರಲ್ಲಿ ಪಶ್ಚಿಮ ಬಂಗಾಳದ ಗಡಿ ಮೂಲಕ ಭಾರತಕ್ಕೆ ನುಸುಳಿದ್ದರು. ಅಲ್ಲಿಂದ ಹೈದರಾಬಾದ್‌ಗೆ ತೆರಳಿ, ‘ರೋಹಿಂಗ್ಯಾ ನಿರಾಶ್ರಿತರ ಶಿಬಿರ’ ಸೇರಿದ್ದರು. ಹೀಗಿರುವಾಗ ಕೆಲವರು ಸ್ಥಳೀಯ ಏಜೆಂಟ್‌ಗಳ ನೆರವಿನಿಂದ ಪಾಸ್‌ಪೋರ್ಟ್ ಮಾಡಿಸಿಕೊಂಡು ವಿದೇಶಕ್ಕೆ ಹೋಗಿ ನೆಲೆಸಿದ್ದರು. ಅವರಲ್ಲಿ ಬಂಧಿತರ ಸಂಬಂಧಿಗಳೂ ಇದ್ದರು.

ಇತ್ತೀಚೆಗೆ ಆಸ್ಮಾಳನ್ನು ಸಂಪರ್ಕಿಸಿದ್ದ ಮಲೇಷ್ಯಾದಲ್ಲಿರುವ ಬಂಧುಗಳು, ‘ಕ್ವಾಲಾಲಂಪುರಕ್ಕೆ ಬಂದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು’ ಎಂದಿದ್ದರು. ಅದರಂತೆ ಆಸ್ಮಾ ಹಾಗೂ ಆಕೆಯ ಪುತ್ರ ಹಾಲೆಕ್ ವಿದೇಶಕ್ಕೆ ಹಾರಲು ನಿರ್ಧರಿಸಿದ್ದರು. ಈ ವಿಚಾರ ತಿಳಿದ ಇತರರು, ‘ನಾವೂ ನಿಮ್ಮೊಟ್ಟಿಗೆ ಮಲೇಷ್ಯಾಕ್ಕೆ ಬರುತ್ತೇವೆ’ ಎಂದಿದ್ದರು. ಆ ನಂತರ ಎಲ್ಲರೂ ಸ್ಥಳೀಯ ಏಜೆಂಟರ ಮೂಲಕ ಅಕ್ರಮವಾಗಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದರು.

‘ರಜತ್ ಪಶ್ಚಿಮ ಬಂಗಾಳದ ವಿಳಾಸದಲ್ಲಿ ದಾಖಲೆ ಸೃಷ್ಟಿಸಿಕೊಂಡಿದ್ದರೆ, ಉಳಿದ ಆರು ಮಂದಿ ತಾವು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಿವಾಸಿಗಳೆಂದು ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದರು’ ಎಂದು ಮಾಹಿತಿ ನೀಡಿದರು.

ಈ ಹಿಂದೆಯೂ ಕೆಐಎನಿಂದ ಪ್ರಯಾಣ ಮಾಡಿದ್ದರೇ? ಅಕ್ರಮವಾಗಿ ಯಾವ್ಯಾವ ದೇಶಗಳಲ್ಲಿ ಸುತ್ತಾಡಿದ್ದರು ಎಂಬ ನಿಟ್ಟಿನಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ಸಮುದಾಯದವರ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳು ನಿಗಾ ವಹಿಸಿವೆ. ಅವರ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಿ ದೇಶದಿಂದ ಹೊರದಬ್ಬಲು ಸರ್ಕಾರ ಯೋಜಿಸಿದೆ. ಅವರಿಗೆ ಪಾಸ್‌ಪೋರ್ಟ್ ಮಾಡಿಕೊಟ್ಟಿರುವ ಜಾಲದ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಯೇ ತನಿಖೆ ನಡೆಸಲಿದೆ’ ಎಂದು ವಿವರಿಸಿದರು.

ಗುರುತಿನ ಪತ್ರಗಳು ಪತ್ತೆ

‘ಆರೋಪಿಗಳನ್ನು ವಶಕ್ಕೆ ಪಡೆದಾಗ ‘ನಾವೆಲ್ಲ ಭಾರತೀಯರು. ನಮ್ಮನ್ನೇಕೆ ಹಿಡಿದುಕೊಂಡಿದ್ದೀರಾ’ ಎಂದು ಗಲಾಟೆ ಮಾಡಿದರು. ನಂತರ ಕೆಐಎಎಲ್ ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು. ಬಂಧಿತರ ಬಳಿ ಹೈದರಾಬಾದ್‌ನ ರೋಹಿಂಗ್ಯಾ ನಿರಾಶ್ರಿತರ ಶಿಬಿರದ ಗುರುತಿನ ಪತ್ರಗಳು ಪತ್ತೆಯಾಗಿವೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.