ರಾಜರಾಜೇಶ್ವರಿನಗರ: ‘ರೋಟರಿ ಒಂದು ಅಂತರರಾಷ್ಟ್ರೀಯ ಸಂಸ್ಥೆ. ಯಾವುದೇ ಅಧಿಕಾರ, ಅಂತಸ್ತಿನ ವ್ಯಾಮೋಹ, ಪ್ರತಿಫಲಾಕ್ಷೆಯಿಲ್ಲದೆ ನಿಸ್ವಾರ್ಥದಿಂದ ಜನಸೇವೆ ಸಲ್ಲಿಸುತ್ತಿದೆ’ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹೇಳಿದರು.
ರೋಟರಿ ಡಿಸ್ಟ್ರಿಕ್ಟ್ 3192 ವತಿಯಿಂದ ಅಂತರರಾಷ್ಟ್ರೀಯ ಸೇವೆ ಮತ್ತು ಸಾರ್ವಜನಿಕ ವ್ಯಕ್ತಿತ್ವದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ರೋಟರಿ ಸಂಸ್ಥೆ ವಿಶ್ವದಾದ್ಯಂತ ಹೆಮ್ಮರವಾಗಿ ಬೆಳೆದು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಹೇಳಿದರು.
ಜಿಲ್ಲಾ ಗವರ್ನರ್ ಆರ್.ಶ್ರೀನಿವಾಸ್‍ಮೂರ್ತಿ ಮಾತನಾಡಿ, ‘ದಾನಿಗಳು, ಉಳ್ಳವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇನ್ನಷ್ಟು ಮುಂದೆ ಬಂದು ಆರೋಗ್ಯ, ಹೃದಯ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್, ಸೀಳುತುಟಿ, ಶಿಕ್ಷಣ, ರಕ್ತದಾನ, ಪರಿಸರ, ನೇತ್ರ, ದಂತ ಪರೀಕ್ಷೆ, ಚಿಕಿತ್ಸೆಯಂತಹ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕಾಗಿದೆ. ಅದನ್ನು ಚಾಚು ತಪ್ಪದೆ ರೋಟರಿಯನ್‍ಗಳು ಮಾಡುತ್ತಿದ್ದಾರೆ’ ಎಂದು ಹೇಳಿದರು.
ಜಿಲ್ಲಾ ರೋಟರಿ 3192 ನಿರ್ದೇಶಕ, ಮಾಧ್ಯಮ ಮುಖ್ಯಸ್ಥ ಕೆ.ಟಿ.ನಿರಂಜನ್, ‘ಪ್ರಪಂಚದಲ್ಲಿ ಪೋಲಿಯೊ ನಿರ್ಮೂಲನೆ ಮಾಡುವದಲ್ಲಿ ರೋಟರಿ ಸಂಸ್ಥೆ ಮುಂದಾಗಿದೆ. ಇಂಟ್ರಾಕ್ಟ್, ರೊಟ್ರಾಕ್ಟ್ ಸಂಸ್ಥೆ ಸ್ಥಾಪಿಸಿ ಸರ್ಕಾರಿ ಶಾಲೆಗಳ ಬದಲಾವಣೆ, ಅಡವಿ ಯೋಜನೆಯಲ್ಲಿ 1,200 ಎಕರೆಯಲ್ಲಿ ಅರಣ್ಯ ಬೆಳೆಸುವುದು, ಬಡ ರೈತರಿಗೆ ಸೀಮೆ ಹಸು ವಿತರಣೆ, ಚೆಕ್‍ಡ್ಯಾಂ ನಿರ್ಮಾಣ, ಕ್ಯಾನ್ಸರ್, ಮುಟ್ಟಿನ ಅರಿವಿನ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ’ ಎಂದರು.
ಪ್ರಕ್ಯ ಟೆಕ್ನಾಲಜೀಸ್‌ನ ಉಪಾಧ್ಯಕ್ಷ ರಾಜೇಶ್ ಚಕ್ರವರ್ತಿ ಮಾತನಾಡಿದರು. ನಿಯೋಜಿತ ಗವರ್ನರ್ ಮಹದೇವಪ್ರಸಾದ್, ರೊಟರಿಯನ್‍ಗಳಾದ ಎಸ್.ನಾಗೇಂದ್ರ, ಪ್ರಭುದೇವ ಆರಾಧ್ಯ, ಜಿತೇಂದ್ರ ಅನೇಜ, ಸುನಿಲ್ ಟೇಲ್ಕರ್, ಕಾರ್ಯದರ್ಶಿ ವಿನೋದ್ ಕುಮಾರ್, ರೋಟರಿ ವಿಶ್ವನೀಡಂ ಅಧ್ಯಕ್ಷ ಶಶಿಧರ್, ರೋಟರಿ ಜಂಕ್ಷನ್‍ನ ಅಧ್ಯಕ್ಷ ಸುರೇಶ್ ಅರಕೆರೆ, ಭರಣಿ ನಿರಂಜನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.