ADVERTISEMENT

‘ಮೀಸಲಾತಿ: ಜನಾಂದೋಲನ ಅಗತ್ಯ’

ಹಿಂದುಳಿದ ವರ್ಗ: ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನ್‌ ದಾಸ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 19:53 IST
Last Updated 24 ಮೇ 2022, 19:53 IST
ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರು ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್‌ ಅವರನ್ನು ಸ್ವಾಗತಿಸಿದರು. ನಾಗರಾಜು, ಅನಂತ ನಾಯಕ್ ಎನ್, ಎ.ಪಿ. ರಂಗನಾಥ್ ಹಾಗೂ ಕೆ. ಶಿವರಾಮ್ ಇದ್ದಾರೆ –ಪ್ರಜಾವಾಣಿ ಚಿತ್ರ
ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರು ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್‌ ಅವರನ್ನು ಸ್ವಾಗತಿಸಿದರು. ನಾಗರಾಜು, ಅನಂತ ನಾಯಕ್ ಎನ್, ಎ.ಪಿ. ರಂಗನಾಥ್ ಹಾಗೂ ಕೆ. ಶಿವರಾಮ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಿಂದುಳಿದ ವರ್ಗಗಳಿಗೆ (ಒಬಿಸಿ) ರಾಜಕೀಯ ಮೀಸಲಾತಿ ಕಲ್ಪಿಸದೆ ಬಲಾಢ್ಯ ಸಮುದಾಯದೊಂದಿಗೆ ಸೇರಿಸಿ,ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸಂವಿಧಾನ ವಿರೋಧಿ ಕ್ರಮ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ಕರ್ನಾಟಕ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ‘ಒಬಿಸಿ ಮೀಸಲಾತಿ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು: ಸವಾಲುಗಳು–ಸಾಧ್ಯತೆಗಳು’ ವಿಷಯದ ಬಗ್ಗೆ ಚರ್ಚಿಸಲಾಯಿತು.

‘ಮೀಸಲಾತಿಯೇ ಅಪ್ರಸ್ತುತ ಎಂಬ ವಾತಾವರಣ ಸೃಷ್ಟಿಯಾಗಿದೆ. ಒಬಿಸಿ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಬಗ್ಗೆ ರಾಜ್ಯದಾದ್ಯಂತ ಜನಾಂದೋಲನ ನಡೆಸಬೇಕು. ರಾಜ್ಯದಲ್ಲಿ ಶೇ 52 ರಷ್ಟು ಹಿಂದುಳಿದ ಸಮುದಾಯದವರಿದ್ದು, ಅವರಿಗೆ ಶೇ 32 ರಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಖಾಡದಲ್ಲಿಯೂ ಈ ಸಮುದಾಯದವರಿಗೆ ಮೀಸಲಾತಿ ಒದಗಿಸಬೇಕು’ ಎಂದು ಎಚ್‌.ಎನ್‌. ನಾಗಮೋಹನ್‌ ದಾಸ್‌ ಹೇಳಿದರು.

ADVERTISEMENT

‘ಒಬಿಸಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಬಗ್ಗೆ ಮಧ್ಯಪ್ರದೇಶ ಸರ್ಕಾರ ಜಾಣ ನಡೆ ಅನುಸರಿಸಿದೆ. ಅಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಆಯೋಗ ರಚನೆ ಮಾಡಿ, ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಲಾಗಿತ್ತು. ಅದೇ ಹಾದಿಯನ್ನು ರಾಜ್ಯ ಸರ್ಕಾರಅನುಸರಿಸಬೇಕು. ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಶಾಶ್ವತಆಯೋಗವು ಹಿಂದುಳಿದ ವರ್ಗಗಳ ಬಗ್ಗೆ ಸಮೀಕ್ಷೆ ನಡೆಸಿ,ವರದಿ ನೀಡಿದೆ. ಈ ಆಧಾರದಲ್ಲಿ ಸರ್ಕಾರವು ರಾಜಕೀಯ ಮೀಸಲಾತಿ ಕಲ್ಪಿಸಿ, ಚುನಾವಣೆ ನಡೆಸಲಿ’ ಎಂದು ಆಗ್ರಹಿಸಿದರು.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್, ‘ವಾರ್ಡ್‌ ಪುನರ್ ವಿಂಗಡನೆಸಂಬಂಧ ಸರ್ಕಾರ ಭಕ್ತ ವತ್ಸಲಂ ಆಯೋಗ ರಚಿಸಿದೆ. ಆದರೆ, ಅದಕ್ಕೆ ಕಾಲಮಿತಿನೀಡಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಸರ್ಕಾರಕ್ಕೆ ಬೇಕಾಗಿಲ್ಲ. ಒಬಿಸಿ ಮೀಸಲಾತಿಯ ಬಗ್ಗೆ ಮತ್ತಷ್ಟು ಜನಾಂದೋಲನ ರೂಪಿಸಬೇಕು’ ಎಂದರು.

‘ಮಂಡ್ಯ, ಮೈಸೂರು, ಚಾಮರಾಜ ನಗರ ಭಾಗಗಳಲ್ಲಿ ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸ ಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳುಚುನಾವಣೆಯಲ್ಲಿ ರಾಜಕೀಯ ಮೀಸಲಾತಿ ಬಗ್ಗೆ ಕಾಳಜಿ ತೋರದೆ ಹೋದರೆ, ಮುಂದಿನ ದಿನಗಳಲ್ಲಿಶಾಸಕರ ಮತ್ತು ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಹಿಂದುಳಿದ ವರ್ಗಗಳ ವೇದಿಕೆಯ ಶಿವರಾಮ್ ಎಚ್ಚರಿಕೆನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.