ADVERTISEMENT

ಮತ್ತೊಬ್ಬ ರೌಡಿಶೀಟರ್‌ ಕಾಲಿಗೆ ಪೊಲೀಸರ ಗುಂಡು

ಕೊಲೆ, ಕೊಲೆಯತ್ನ, ದರೋಡೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 19:50 IST
Last Updated 13 ಆಗಸ್ಟ್ 2019, 19:50 IST
ಆರೋಪಿ ಭರತ್
ಆರೋಪಿ ಭರತ್   

ಬೆಂಗಳೂರು: ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ರೌಡಿಶೀಟರ್‌ನನ್ನು ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಭರತ್‌ ಅಲಿಯಾಸ್‌ ಬಾಬಿ (25) ಬಂಧಿತ ಆರೋಪಿ. ಇತ್ತೀಚೆಗಷ್ಟೆ ಜೈಲಿ ನಿಂದ ಹೊರಬಂದಿರುವ ಆರೋಪಿಯ ಹೆಸರು, ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿದೆ.

ಭರತ್‌ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಮತ್ತು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗಳಲ್ಲಿ ತಲಾ ಎರಡು ಕೊಲೆಯತ್ನ ಪ್ರಕರಣ, ದರೋಡೆ, ಬ್ಯಾಟರಾಯನಪುರ ಮತ್ತು ನೆಲಮಂಗಲ ಪೊಲೀಸ್‌ ಠಾಣೆಗಳಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿವೆ.

ADVERTISEMENT

ಇದೇ 8ರಂದು ಮಧ್ಯಾಹ್ನ 2.45ರ ಸುಮಾರಿಗೆ ನಂದಿನಿ ಲೇಔಟ್‌ ವ್ಯಾಪ್ತಿಯ ಗಣೇಶ್‌ ಬ್ಲಾಕ್‌ನ ಆರನೇ ಅಡ್ಡರಸ್ತೆಯಲ್ಲಿ ತಂದೆಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಎದುರಾಳಿ ರೌಡಿ ವೆಂಕಟೇಶ್‌ ಅಲಿಯಾಸ್ ಕಾಡು ಎಂಬಾತನ ಮೇಲೆ ಆರೋಪಿ ಭರತ್‌ ಮತ್ತು ಆತನ ನಾಲ್ವರು ಸಹಚರರು ಏಕಾಏಕಿ ಚಾಕುವಿನಿಂದ ಚುಚ್ಚಿ, ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು.

ಈ ಸಂಬಂಧ ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌, ಆರೋಪಿಗಳ ಪತ್ತೆಗೆ ನಂದಿನಿ ಲೇಔಟ್‌ ಇನ್‌ಸ್ಪೆಕ್ಟರ್‌ ಲೋಹಿತ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಈ ಮಧ್ಯೆ, ಸೋಮವಾರ ರಾತ್ರಿ 12.40ರ ಸುಮಾರಿಗೆ ಮಂಜುನಾಥ ಎಂಬುವವರು ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ಲಗ್ಗೆರೆ ಬ್ರಿಜ್‌ ಬಳಿ ಹೋಗುತ್ತಿದ್ದಾಗ ದರೋಡೆಕೋರರು ಅಡ್ಡಗಟ್ಟಿ ಮೊಬೈಲ್‌, ಹಣ ಮತ್ತು ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಮಂಜುನಾಥ ತಕ್ಷಣ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಆ ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್‌ ಲೋಹಿತ್‌, ಪಿಎಸ್‌ಐ ಲಕ್ಷ್ಮಣ್‌ ಮತ್ತು ಸಿಬ್ಬಂದಿ ಆರೋಪಿಗಳ ಬೆನ್ನು ಬಿದ್ದಿದ್ದರು.

ಅಪಹರಿಸಿದ ಬೈಕಿನಲ್ಲೇ ದರೋಡೆಕೋರ ಹೋಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬೆನ್ನಟ್ಟಿದ ಪಿಎಸ್‌ಐ ಲಕ್ಷ್ಮಣ್‌ ಮತ್ತು ತಂಡಕ್ಕೆ, ಜಾಲಹಳ್ಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿ ಆರೋಪಿ ಭರತ್‌ ಕಾಣಿಸಿಕೊಂಡಿದ್ದ. ಕಾನ್‌ಸ್ಟೆಬಲ್ ಉಮೇಶ್‌ ಹಿಡಿಯಲು ಮುಂದಾಗುತ್ತಿದ್ದಂತೆ ಆರೋಪಿ ತನ್ನ ಬಳಿಯಲ್ಲಿದ್ದ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದ. ಈ ವೇಳೆ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಲಕ್ಷ್ಮಣ್‌, ಶರಣಾಗುವಂತೆ ಸೂಚಿಸಿದ್ದಾರೆ. ಅಷ್ಟರಲ್ಲಿ, ತಮ್ಮ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.