ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಹಾಗೂ ಮಾರಕಾಸ್ತ್ರಗಳಿಂದ ಬೆದರಿಸಿ ನಾಗರಿಕರನ್ನು ಸುಲಿಗೆ ಮಾಡುತ್ತಿದ್ದ ರೌಡಿ ಬರ್ನ್ ಸಿದ್ಧಿಕಿ (28) ಎಂಬಾತನನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಶಿವಾಜಿನಗರದ ನಿವಾಸಿಯಾದ ಈತ ಕಳ್ಳತನ ಹಾಗೂ ಸುಲಿಗೆ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದ. ದ್ವಿಚಕ್ರ ವಾಹನವೊಂದು ಕಳುವಾಗಿರುವ ಕುರಿತು ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿದ್ಧಿಕಿ ಸ್ಕೂಟರ್ ಕದಿಯುತ್ತಿದ್ದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಹಗಲು ಹೊತ್ತಿನಲ್ಲೇ ಜೆ.ಸಿ.ನಗರ ಠಾಣೆ ವ್ಯಾಪ್ತಿಯ ಆಭರಣ ಮಳಿಗೆಯೊಂದಕ್ಕೆ ನುಗ್ಗಿದ್ದ ಈತ ಮಾರಕಾಸ್ತ್ರ ತೋರಿಸಿ ಮಾಲೀಕನಿಂದ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ. ವಿಚಾರಣೆ ವೇಳೆ ಇದನ್ನು ಒಪ್ಪಿಕೊಂಡಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಈತ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದಾನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.