ADVERTISEMENT

ನಾಲ್ವರ ವಿರುದ್ಧ ಪ್ರಕರಣ: 60 ಖಾತೆ ನಿಷ್ಕ್ರಿಯ

ರೌಡಿ ಪಟ್ಟಿಯಲ್ಲಿರುವವರ ಪರ ‘ಫ್ಯಾನ್‌ ಪೇಜ್’ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:40 IST
Last Updated 22 ಜುಲೈ 2024, 18:40 IST
<div class="paragraphs"><p>ಜೈಲು ಶಿಕ್ಷೆ(ಪ್ರಾತಿನಿಧಿಕ ಚಿತ್ರ)</p></div>

ಜೈಲು ಶಿಕ್ಷೆ(ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ರೌಡಿಪಟ್ಟಿಯಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿರುವ ‘ಫ್ಯಾನ್‌ ಪೇಜ್‌’ಗಳಿಗೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರೌಡಿ ಪಟ್ಟಿಯಲ್ಲಿರುವವರ ಪರ ಫ್ಯಾನ್‌ ಪೇಜ್ ಸೃಷ್ಟಿಸಿ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಯೂಟ್ಯೂಬ್ ಸೇರಿದಂತೆ 60ಕ್ಕೂ ಅಧಿಕ ಖಾತೆಗಳನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು, ಅವುಗಳನ್ನು ನಿರ್ವಹಣೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

‘ವಿಲ್ಸನ್ ಗಾರ್ಡನ್’ ನಾಗ, ‘ಸೈಲೆಂಟ್’ ಸುನೀಲ್‌, ‘ಸೈಕಲ್’ ರವಿ ಸೇರಿ ಅಪರಾಧ ಹಿನ್ನೆಲೆಯುಳ್ಳ ಹಲವು ರೌಡಿಗಳ ಹೆಸರಿನಲ್ಲಿ ‘ಸಿ’–ಬಾಸ್, ‘ಎನ್’–ಬಾಸ್, ‘ಎಸ್’– ಬಾಸ್... ಹೆಸರಿನ ಟ್ಯಾಗ್‌ಲೈನ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್‌ಗಳನ್ನು ತೆರೆಯಲಾಗಿತ್ತು.

ಇಂತಹ ಪೇಜ್ ಅನ್ನು ಸಾವಿರಾರು ಯುವಕರು ಹಿಂಬಾಲಿಸುತ್ತಿದ್ದರು. ಸಿನಿಮಾಗಳ ಸಂಭಾಷಣೆ ಹಾಗೂ ಹಾಡುಗಳನ್ನು ಬಳಸಿ ಪ್ರಚೋದಿಸಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಇದೀಗ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.   

'60 ಖಾತೆಗಳನ್ನು ನಿಷ್ಕ್ರಿಯಗೊಳಿಸಿ, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾರೂ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ‌.

ವಿಡಿಯೊ ಪೋಸ್ಟ್‌ಗೆ ₹500: ‘ಒಂದು ವಿಡಿಯೊ ಎಡಿಟ್ ಮಾಡಿ ಪೋಸ್ಟ್ ಮಾಡಲು ರೌಡಿಗಳು ₹500 ನೀಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಅವರ ಪ್ರಭಾವಕ್ಕೆ ಒಳಗಾಗಿ ಕೆಲವು ಯುವಕರು ರೌಡಿಗಳ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ಖಾತೆ ತೆರೆದು ನಿರ್ವಹಣೆ ಮಾಡುತ್ತಿದ್ದರು. 60 ಖಾತೆಗಳಿಂದ 500ಕ್ಕೂ ಹೆಚ್ಚು ವಿಡಿಯೊಗಳನ್ನು ಅಳಿಸಿ ಹಾಕಲಾಗಿದೆ. ಹಣ ನೀಡಿ ವಿಡಿಯೊ ಮಾಡಿಸಿದ್ದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ‘ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.